ರೌಡಿ ಕಾಲಿಯಾ ರಫೀಕ್ ಕೊಲೆ ಆರೋಪಿ ಪತ್ತೆಕಾರ್ಯ ಚುರುಕು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದುಷ್ಕರ್ಮಿಗಳ ಶೂಟೌಟ್, ತಲವಾರಿ ನೇಟಿಗೆ ಬಲಿಯಾಗಿದ್ದ ರೌಡಿ ಕಾಲಿಯಾ ರಫೀಕ್ ಕೊಲೆ ಆರೋಪಿಗಳ ಪತ್ತೆಗೆ ಶೋಧ ತೀವ್ರಗೊಂಡಿದೆ.

ಉಪ್ಪಳದ ಕುಖ್ಯಾತ ರೌಡಿ ಸುಮಾರು 45ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಖಾಲಿಯಾ ರಫೀಕನನ್ನು ಕೋಟೆಕಾರು ಪೆಟ್ರೋಲ್ ಪಂಪ್ ಎದುರುಗಡೆ ದುಷ್ಕರ್ಮಿಗಳು ಅಪಘಾತವೆಸಗಿ ಗುಂಡಿಕ್ಕಿ ಬಳಿಕ ತಲವಾರಿನಿಂದ ಕಡಿದು ಹತ್ಯೆ ನಡೆಸಿದ್ದರು. ಈ ಮೂಲಕ 2013ರಲ್ಲಿ ಕಾಲಿಯಾನಿಂದ ಹತ್ಯೆಗೀಡಾಗಿದ್ದ ಮುತ್ತಲಿಬ್ ಸಹೋದರರು ಸೇಡು ತೀರಿಸಿಕೊಂಡಿದ್ದಾರೆಂಬ ಮಾಹಿತಿ ಮಂಜೇಶ್ವರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಕೇರಳದಲ್ಲೂ ಹಲವು ಪ್ರಕರಣಗಳಲ್ಲೂ ಶಾಮೀಲಾಗಿದ್ದ ಕಾಲಿಯಾನನ್ನು ಈ ಹಿಂದೆ ಕೇರಳದಲ್ಲೂ ಕೊಲೆಗೈಯ್ಯಲು ಯತ್ನ ನಡೆದಿತ್ತು. ಕರ್ನಾಟಕದಲ್ಲೂ ಕೆಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಕಾಲಿಯಾ ವಿರುದ್ಧ ಹಲವು ಮಂದಿ ಪೂರ್ವದ್ವೇಷ ಹೊಂದಿದ್ದರು. ಹೀಗಾಗಿ ಎರಡೂ ರಾಜ್ಯಗಳ ಪೊಲೀಸರಿಗೆ ಈ ಪ್ರಕರಣವನ್ನು ಬೇಧಿಸುವುದು ಕೂಡಾ ಸವಾಲಾಗಿದೆ.