ಭಾಷೆ ಅವಗಣನೆ ವಿರುದ್ಧ ಕನ್ನಡ ಪರ ಸಂಘಟನೆ ಪ್ರತಿಭಟನೆ

ಧರಣಿಗೆ ಮುನ್ನ ಕನ್ನಡಪರ ಸಂಘಟನೆಗಳು ಮೆರವಣಿಗೆ ನಡೆಸಿದವು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ತಲಪಾಡಿಯಿಂದ ಚಂದ್ರಗಿರಿ ತೀರದ ಭೂಭಾಗ ಕನ್ನಡಿಗರದ್ದು. ಇಲ್ಲಿನ ಸರಕಾರಿ ಕಚೇರಿಗಳಲ್ಲಿ ಕನ್ನಡವನ್ನು ಅವಗಣಿಸಲಾಗುತ್ತಿದ್ದು, ಕನ್ನಡಗರಿಗೆ ಅನ್ಯಾಯವೆಸಗಲಾಗುತ್ತಿದೆ. ಭಾಷಾವಾರು ಪ್ರಾಂತ್ಯ ರಚನೆಯ ವೇಳೆ ಕೇರಳಕ್ಕೆ ಸೇರ್ಪಡೆಗೊಂಡ ಈ ಪ್ರದೇಶದಲ್ಲಿ ಪ್ರಸ್ತುತ ಕನ್ನಡ ಭಾಷೆಯ ಬಗ್ಗೆ ಸರಕಾರಿ ಕಚೇರಿಗಳು ಅಸಡ್ಡೆ ತೋರಿಸುತ್ತಿರುವುದು ಖಂಡನೀಯ. ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಯ ಜವಾಬ್ದಾರಿ ಸರಕಾರಕ್ಕಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಕನ್ನಡ ಹೋರಾಟಗಾರ ನಾರಾಯಣ ಗಟ್ಟಿ ಮಾಸ್ತರ್ ಕುಂಬಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ಕನ್ನಡ ಪರ ಸಂಘಟನೆಗಳು ಗುರುವಾರ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿ ಕಾರ್ಯಾಲಯಕ್ಕೆ ಹಮ್ಮಿಕೊಂಡ ಬೃಹತ್ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಂವಿಧಾನಿಕ ಹಕ್ಕು ಪೂರೈಸದಿದ್ದಲ್ಲಿ ಕನ್ನಡಿಗರು ಎಚ್ಚೆತ್ತು ಹೋರಾಟಕ್ಕಿಳಿಯಬೇಕಾದಿತು ಎಂದು ಎಚ್ಚರಿಕೆ ನೀಡಿದ ಅವರು, ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೆ ಕಾಸರಗೋಡಿನ ಕನ್ನಡಿಗರಾದ ತೊಂದರೆಗಳನ್ನು ವಿವರಿಸಿದರು. ಕಾಸರಗೋಡಿನ ಹೆಚ್ಚಿನ ಸರಕಾರಿ ಕಚೇರಿಗಳಲ್ಲಿ ಕನ್ನಡದ ಅವಗಣನೆ ಅವ್ಯಾಹತವಾಗಿದೆ, ಕನ್ನಡಪರ ಕಾಳಜಿ ಮೂಡಿಸುವ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ಕನ್ನಡ ಭಾಷಾ ಸೆಲ್ಲುಗಳು ಸರಕಾರಿ ಕಚೇರಿಗಳಲ್ಲಿ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು. ಇತ್ತೀಚೆಗೆ ಭೂ ದಾಖಲೆಗಳ ಡಿಜಿಟಲೀಕರಣ ಪ್ರಾರಂಭವಾಗಿದೆ. ಏತನ್ಮಧ್ಯೆ ಕನ್ನಡ ಸ್ಥಳನಾಮಗಳ ಮಲಯಾಳಿಕರಣವಾಗುತ್ತಲಿದೆ ಎಂದರು.

ಸಭೆಯ ಮುನ್ನ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಕೈಕಂಬದಿಂದ ಉಪ್ಪಳ ತಾಲೂಕು ಕಚೇರಿ ಮುಂಭಾಗದವರೆಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಮೆರವಣಿಗೆ ನಡೆಯಿತು.