`ಒಬ್ಬ ನಿರ್ದೇಶಕನಿಂದಾಗಿ ಪ್ರಿಯಾಂಕಾ 10 ಚಿತ್ರ ಕಳೆದುಕೊಂಡಳು’ : ಮಧು ಚೋಪ್ರಾ

ಪ್ರಿಯಾಂಕಾ ಚೋಪ್ರಾ ಹಾಗೂ ಆಕೆಯ ತಾಯಿ ಮಧು ಚೋಪ್ರಾ ಈಗ ಯಶಸ್ವಿಯಾಗಿ ನಿರ್ಮಾಣ ಸಂಸ್ಥೆ ನಡೆಸುತ್ತಿದ್ದು ಅವರ ಮೊದಲ ಮರಾಠಿ ಚಿತ್ರ ಕೆಲವಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರಲ್ಲಿ ಯಶಸ್ವಿಯಾಗಿತ್ತು. ಮಧು ಚೋಪ್ರಾ ಹೈದರಾಬಾದಿನಲ್ಲಿ ನಡೆಯುತ್ತಿರುವ `ಮಕ್ಕಳ ಚಿತ್ರೋತ್ಸವ’ ಕಾರ್ಯಕ್ರಮದ ಜಡ್ಜ್ ಕೂಡಾ ಆಗಿದ್ದು ಈ ಸಂದರ್ಭದಲ್ಲಿ ಮಾತಾಡುತ್ತಾ ಅವರು ತಮ್ಮ ನಿರ್ಮಾಣದ ಚಿತ್ರಗಳಲ್ಲಿ ನಟಿಸಲು ಮಹಿಳೆಯರು ಯಾವ ಕಾಂಪ್ರಮೈಸೂ ಮಾಡಿಕೊಳ್ಳಬೇಕಿಲ್ಲ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತಾಡುತ್ತಾ “ಪ್ರಿಯಾಂಕಾ ತನ್ನ 17ನೇ ವಯಸ್ಸಿಗೇ ಬಣ್ಣದ ಲೋಕಕ್ಕೆ ಕಾಲಿಟ್ಟಳು. ಆಕೆಯ ಜೊತೆ ನಾನು ಎಲ್ಲಾ ಕಡೆ ಹೋಗುತ್ತಿದ್ದೆ. ಒಬ್ಬ ನಿರ್ದೇಶಕ ಸ್ಕ್ರಿಪ್ಟ್ ಬಗ್ಗೆ ಹೇಳುತ್ತೇನೆ ಎಂದು ಕರೆಸಿಕೊಂಡಾಗ ನಾನೂ ಆಕೆ ಜೊತೆ ಹೋಗಿದ್ದೆ. ನನಗೆ ಹೊರಗಿರಲು ತಿಳಿಸಿದರು. ಆಗ ಪ್ರಿಯಾಂಕಾ ಅಮ್ಮ ಕೇಳಿಸಿಕೊಳ್ಳಬಾರದಂತಹ ಕತೆಯಲ್ಲಿ ನಾನು ಸಿನಿಮಾ ಮಾಡಲಾರೆ” ಎಂದು ಹೊರನಡೆದಳು. ಇನ್ನೊಬ್ಬರು ಫೇಮಸ್ ಡೈರೆಕ್ಟರ್ ಪ್ರಿಯಾಂಕಾಗೆ ಚಿಕ್ಕ ಉಡುಪು ಧರಿಸಲು ಹೇಳಿದ್ದು ಮಾತ್ರವಲ್ಲದೇ “ವಿಶ್ವಸುಂದರಿಯನ್ನು ಪರದೆ ಮೇಲೆ ಅವಳ ಸೌಂದರ್ಯವನ್ನು ಬಿಚ್ಚಿ ತೋರಿಸಲು ಸಾಧ್ಯವಾಗದಿದ್ದರೆ ಅದರಿಂದೇನು ಪ್ರಯೋಜನ?” ಎಂದು ಕೆಟ್ಟದಾಗಿ ಹೇಳಿದಾಗಲೂ ಪ್ರಿಯಾಂಕಾ ಆ ಚಿತ್ರದಿಂದಲೇ ಹೊರನಡೆದಿದ್ದಳು. ಅದರಿಂದ ಅಪ್ಸೆಟ್ ಆದ ಆ ನಿರ್ದೇಶಕನ ಕರಾಮತ್ತಿನಿಂದಾಗಿ ಪ್ರಿಯಾಂಕಾ 10 ಸಿನಿಮಾ ಕಳೆದುಕೊಂಡಳು. ಆದರೂ ಪ್ರಿಯಾಂಕಾ ಅದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಮಧು ಚೋಪ್ರಾ.

ಮಗಳ ಬಗ್ಗೆ ಭಾರೀ ಹೆಮ್ಮೆಯಂದ ಮಾತಾಡುವ ಮಧು ಅವರು ಪ್ರತಿಯಬ್ಬ ಮಹಿಳೆಗೂ ಇಷ್ಟವಾಗದಿದ್ದರೆ ನೋ ಎಂದು ಹೇಳುವುದು ಗೊತ್ತಿರಬೇಕು. ಜೀವನ ಅಲ್ಲಿಗೇ ಮುಗಿದುಹೋಗುವುದಿಲ್ಲ. ಬೇರೆ ಅವಕಾಶಗಳು ಸಿಕ್ಕೇ ಸಿಗುತ್ತದೆ ಎಂದು ಮಹಿಳೆಯರಿಗೆ ಸ್ಪೂರ್ತಿ ನೀಡುವಂತಹ ಮಾತುಗಳನ್ನು ಹೇಳಿದ್ದಾರೆ.