ಯೋಗಿ ತಾರಾ ಪ್ರಚಾರಕರೆಂದಾದರೆ ಬಿಜೆಪಿ ಚುನಾವಣಾ ತಂತ್ರ ಏನೆಂದು ಊಹಿಸಿ

ಪ್ರಿಯಾಂಕ ಚತುರ್ವೇದಿ

ಬೆಂಗಳೂರು : “ಕರ್ನಾಟಕದ ಮುಂದಿನ ಚುನಾವಣೆಗೆ ಬಿಜೆಪಿಯ ತಾರಾ ಪ್ರಚಾರಕರಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತಹವರು ಇರುವರೆಂದಾದರೆ ಈ ಚುನಾವಣೆಯನ್ನು ಯಾವ ತಳಹದಿಯ ಮೇಲೆ ಅವರ ಪಕ್ಷ  ಎದುರಿಸಲಿದೆ ಎಂಬುದುನ್ನು ಯಾರು ಕೂಡಾ ಊಹಿಸಬಹುದು” ಎನ್ನುತ್ತಾರೆ ಎಐಸಿಸಿ ವಕ್ತಾರೆ ಹಾಗೂ ಪಕ್ಷದ ಸಂವಹನ ಘಟಕದ ಸಂಚಾಲಕಿಯೂ ಆಗಿರುವ ಪ್ರಿಯಾಂಕ ಚರ್ತುವೇದಿ.

ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಬಿಜೆಪಿ ಕೋಮು ರಾಜಕಾರಣದಲ್ಲಿ ತೊಡಗಬಹುದೆಂದು ಸರಿಯಾಗಿಯೇ ಊಹಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಮಗೆ ನೀಡಿದ ಏಕೈಕ ಸಲಹೆ “ಬಿಜೆಪಿಯ ಕೋಮು ಅಜೆಂಡಾವನ್ನು ಮಟ್ಟ ಹಾಕಿ” ಎಂಬುದಾಗಿತ್ತು ಎಂದು ಎಐಸಿಸಿ ವಕ್ತಾರೆ ಪ್ರಿಯಾಂಕ ಚತುರ್ವೇದಿ ಹೇಳುತ್ತಾರೆ. ಸದ್ಯ ಪ್ರಿಯಾಂಕ ಮುಂದಿನ ಚುನಾವಣೆಯ ದೃಷ್ಟಿಯಿಂದ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ `ಕರ್ನಾಟಕ ಮಾದರಿ ಆಡಳಿತ’ವನ್ನು ಜನತೆಯ ಮುಂದಿಡಲು ಬಯಸಿದೆ ಎಂದು ಅವರು ಹೇಳುತ್ತಾರೆ. ಗುಜರಾತ್ ಚುನಾವಣೆಯಲ್ಲಿ ಗುಜರಾತ್ ಮಾದರಿ ವಿರುದ್ಧ ಹೋರಾಡಿದ ಕಾಂಗ್ರೆಸ್ ಇದೀಗ ಎಲ್ಲರನ್ನೂ ಸೇರ್ಪಡಿಸಿಕೊಂಡು ಅಭಿವೃದ್ಧಿ ಸಾಧಿಸಿರುವ ಕರ್ನಾಟಕ ಮಾದರಿ ಆಡಳಿತವನ್ನು ಕೇಂದ್ರದಲ್ಲೂ ಜಾರಿಗೆ ತರಬೇಕು ಎಂಬರ್ಥದಲ್ಲಿ ತನ್ನ ಅಭಿಯಾನ ನಡೆಸಲಿದೆ ಎಂದು ಪ್ರಿಯಾಂಕ ಹೇಳುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮೀಣ ಭಾಗದಲ್ಲಿ ಜನಪ್ರಿಯರಾಗಿದ್ದಷ್ಟು ನಗರ ಪ್ರದೇಶಗಳಲ್ಲಿ ಜನಪ್ರಿಯರಾಗಿಲ್ಲ ಎಂಬ ವಾದವನ್ನು ಪ್ರಿಯಾಂಕ ಒಪ್ಪುವುದಿಲ್ಲ. “ನಾನು ಹಲವರ ಜತೆ ಮಾತನಾಡಿದ್ದೇನೆ. ಕರ್ನಾಟಕದ ಮುನ್ನಡೆಗೆ ಕಾಂಗ್ರೆಸ್ ಪಕ್ಷವೇ ಸೂಕ್ತ ಎಂಬ ಅಭಿಪ್ರಾಯವನ್ನು ಹೆಚ್ಚಿನವರು ವ್ಯಕ್ತಪಡಿಸಿದ್ದಾರೆ” ಎಂದು ಅವರು ವಿವರಿಸುತ್ತಾರೆ.

 

LEAVE A REPLY