ಸುದೀಪ್ ಶೂಟಿಂಗಿನಲ್ಲಿ ಪ್ರಿಯಾ ಭಾಗಿ

ಸುದೀಪ್ ಹಾಗೂ ಪ್ರಿಯಾ ಈಗ ಮತ್ತೆ ಒಂದಾಗಿದ್ದಾರೆ. ವಿಚ್ಛೇದನದ ಅರ್ಜಿಯನ್ನು ವಾಪಾಸು ಪಡೆದ ನಂತರ ಈಗ ಮದುವೆಯಾದ ಹೊಸತರಲ್ಲಿ ಹೇಗೆ ಒಬ್ಬರು ಇನ್ನೊಬ್ಬರ ಹತ್ತಿರ ಯಾವಾಗಲೂ ಇರಲು ಬಯಸುತ್ತಾರೋ ಅದೇ ರೀತಿ ಹೆಚ್ಚಾಗಿ ಜೊತೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸಿ ಸಿ ಎಲ್ ಆಟಗಾರ ರಾಜೀವ್ ಅವರ `ದೊನ್ನೆ ಬಿರಿಯಾನಿ ಮನೆ’ ಉದ್ಘಾಟನೆ ಸಮಾರಂಭಕ್ಕೂ ಸುದೀಪ್ ದಂಪತಿ ಜೊತೆಯಾಗಿಯೇ ಆಗಮಿಸಿದ್ದರು. ಈಗ `ದಿ ವಿಲನ್’ ಶೂಟಿಂಗ್ ನಡೆಯುವ ಸ್ಥಳಕ್ಕೂ ಪ್ರಿಯಾ ಆಗಮಿಸಿ ಎಲ್ಲರಿಗೂ ಅಚ್ಚರಿ ಹುಟ್ಟಿಸಿದ್ದಾಳೆ.

ಸುದೀಪ್ ಅಭಿನಯದ `ದಿ ವಿಲನ್’ ಚಿತ್ರದ ಶೂಟಿಂಗ್ ಸದ್ಯ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ. ಸುದೀಪ್ ಹಾಗೂ ಚಿತ್ರದ ನಾಯಕಿ ಆಮಿ ಜಾಕ್ಸನ್ ಅಭಿನಯದ ಕೆಲವು ದೃಶ್ಯಗಳ ಶಾಟ್ ತೆಗೆದುಕೊಳ್ಳುತ್ತಿದ್ದಾರೆ. ಸುದೀಪ್ ಬಿಳಿ ಪಂಚೆ, ಬಿಳಿ ಶರ್ಟ್ ತೊಟ್ಟು ಮದುಮಗನಂತೆ ಕಂಗೊಳಿಸುತ್ತಿದ್ದರೆ ಆಮಿ ಸೀರೆ ಉಟ್ಟು ಬಿಂದಿ ಹಚ್ಚಿ ಅಪ್ಪಟ ಭಾರತೀಯ ನಾರಿಯಂತೆ ಮಿಂಚುತ್ತಿದ್ದಾಳೆ. ಇಲ್ಲಿಗೀಗ ಸುದೀಪ್ ಪತ್ನಿ ಪ್ರಿಯಾ ಆಗಮಿಸಿದ್ದು ಚಿತ್ರತಂಡದ ಹುಮ್ಮಸ್ಸು ಇನ್ನಷ್ಟು ಹೆಚ್ಚಿಸಿದ್ದಾಳೆ. ಎಲ್ಲರ ಜೊತೆ ನಗುನಗುತ್ತಾ ಮಾತಾಡುತ್ತಿರುವ ಪ್ರಿಯಾಳನ್ನು ನೋಡಿ ಸುದೀಪ್ ಭಾರೀ ಸಂತಸಗೊಂಡಿದ್ದಾನೆ. ಆಮಿ ಜಾಕ್ಸನ್ ಜೊತೆ ಪ್ರಿಯಾ ಫೊಟೋಗೂ ಖುಶಿಯಿಂದಲೇ ಪೋಸ್ ನೀಡಿದ್ದಾಳೆ. ಅಂತೂ ಸುದೀಪ್-ಪ್ರಿಯಾರ ಈ ಅನುಬಂಧದಿಂದ ಆತನ ಅಭಿಮಾನಿಗಳ ದಿಲ್ ಖುಶ್ ಆಗಿದೆ.

ಸುದೀಪ್ ಈಗ ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ಖುಶಿಯಾಗಿದ್ದಾನೆ. ಟಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಚಿತ್ರದಲ್ಲೂ ನಟಿಸುವ ಅವಕಾಶ ಕಿಚ್ಚನಿಗೆ ಸಿಕ್ಕಿದೆ. `ರೈಸನ್’ ಎನ್ನುವ ಹಾಲಿವುಡ್ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾನೆ.