ಖಾಸಗಿ ಬಸ್ಸಿನೊಳಕ್ಕೂ ಬಂತು ವೈಫೈ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಭಾರತ ಡಿಜಿಟಲೀಕರಣದತ್ತ ಸಾಗಿದೆ. ಮಂಗಳೂರು ಕೂಡಾ ಅಷ್ಟೇ ವೇಗವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳಿಗೆ ಪೈಪೋಟಿ ನೀಡುತ್ತಿರುವ ಖಾಸಗಿ ಬಸ್ಸುಗಳು ಇದೀಗ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಇದೀಗ ಇದೇ ಡಿಜಿಟಲೀಕರಣ ವ್ಯವಸ್ಥೆಗೆ ನೆಚ್ಚಿಕೊಂಡಿದೆ. ಇದೇ ಕಾರಣಕ್ಕೆ ನಗರದಿಂದ ಗ್ರಾಮಾಂತರಕ್ಕೆ ಚಲಿಸುವ ಬಸ್ಸಿನೊಳಕ್ಕೂ ವೈಫೈ ಸೌಲಭ್ಯ ಹೊಕ್ಕಿದೆ.

ನಾಟೆಕಲ್ ನಿವಾಸಿ ಎ ಬಿ ಇಬ್ರಾಹಿಂ ಮಾಲಕತ್ವದ ಗೋಲ್ಡನ್ ಲೈನ್ ಬಸ್ಸಿನಲ್ಲಿ ಉಚಿತ ವೈಫೈ ಸೌಲಭ್ಯ ಪ್ರಾರಂಭಿಸಲಾಗಿದೆ. ಇಬ್ರಾಹಿಂ ಪುತ್ರ ಅಬ್ದುಲ್ ರೆಹಮಾನ್ ಚಾಲಕನಾಗಿರುವ 54 ನಂಬ್ರದ ಈ ಬಸ್ಸಿನಲ್ಲಿ ಉಚಿತ ಅಂತರ್ಜಾಲ ಅಳವಡಿಸಲು ರೆಹಮಾನ್ ಪುತ್ರ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ ಆಗಿರುವ ಯುವಕನಾಗಿರುವ ಅಫ್ರೀಝ್ ಆಸಕ್ತರಾಗಿದ್ದರು.

ಎರಡು ದಿನಗಳಿಂದ ಮಂಗಳೂರಿನಿಂದ ಹೂಹಾಕುವಕಲ್ಲು ಕಡೆಗೆ ಚಲಿಸುವ ಈ ನಗರ ಸಾರಿಗೆ ಬಸ್ಸಿನಲ್ಲಿ ಉಚಿತ ವೈಫೈ  ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸಲಾಗಿದೆ.

ವೈಫೈ ಹೆಸರು ಮತ್ತು ಅದರ ಪಾಸ್ವÀರ್ಡನ್ನು ಬಸ್ಸಿನ ಒಳಭಾಗದಲ್ಲಿ ಸ್ಟಿಕರ್ ಮೂಲಕ ಅಂಟಿಸಲಾಗಿದೆ. ಎರಡು ದಿನಗಳಿಂದ ಬಸ್ಸಿನಲ್ಲಿ ಉಚಿತ ವೈಫೈ ಇದೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಗ್ರಾಮಾಂತರ ಭಾಗದ ಶಿಕ್ಷಿತರು ಮೊಬೈಲಿನಲ್ಲಿ ಅಂತರ್ಜಾಲವನ್ನು ಬಳಕೆ ಮಾಡಲು ಹಿಂದೆ ಮುಂದೆ ನೋಡುತ್ತಾರೆ.  ಅವರಿಗೆ ಉಚಿತ ಸೇವೆ ಅನುಕೂಲವಾಗಬಹುದು ಅನ್ನುವ ಭರವಸೆ ಇದೆ ಎಂದು ಚಾಲಕ ರೆಹಮಾನ್ ಹೇಳುತ್ತಾರೆ.

ಜಿಯೋ ರೂಟರ್ ಬಳಕೆ

ಸ್ಟೇರಿಂಗ್ ಸಮೀಪ ಜಿಯೋ ಕಂಪೆನಿಯ ರೂಟರ್ ಅನ್ನು ಅಳವಡಿಸಲಾಗಿದೆ. ವಿದ್ಯುತ್ ರೀಚಾರ್ಜ್ ಮಾಡುವ ರೂಟರ್ ಸಾಧನವಾಗಿರುವುದರಿಂದ ಬಸ್ ರಾತ್ರಿ ನಿಲ್ಲುವ ಸಮಯದಲ್ಲಿ ಅದನ್ನು ಚಾರ್ಜ್ ಮಾಡಲಾಗುತ್ತದೆ.