ಕೈದಿ ಆಸ್ಪತ್ರೆಯಲ್ಲಿ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಸೌಖ್ಯದ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ನಗರದ ಜೈಲಿನ ಕೈದಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕಾಸರಗೋಡಿನ ಉದಯಕುಮಾರ್ ರೈ (32) ಮೃತ ಕೈದಿ.

ಉರ್ವ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಉದಯಕುಮಾರನನ್ನು ಬಂಧಿಸಲಾಗಿತ್ತು. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಭಾನುವಾರ ಸಂಜೆ 6.50ರ ಸುಮಾರಿಗೆ ಸಾವನ್ನಪ್ಪಿದ್ದಾನೆ.

5 ಕಿಲೋ ಗ್ರಾಂ ಗಾಂಜಾ ಸಾಗಾಟ ಮಾಡಿದ ಆರೋಪದಲ್ಲಿ ಉರ್ವ ಪೊಲೀಸರು ಈತನನ್ನು ಬಂಧಿತನಾಗಿದ್ದ. ಈತನನ್ನು ಹಳೇ ಜೈಲ್‍ನಲ್ಲಿ ಇರಿಸಲಾಗಿತ್ತು. 10 ದಿನಗಳ ಹಿಂದೆ ಉದಯಕುಮಾರ್ ಮೇಲೆ ಜೈಲಿನಲ್ಲಿ ಸಹಕೈದಿಗಳು ಈತನ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಅಂದು ಉದಯಕುಮಾರ್ ಗಂಭೀರ ಗಾಯಗೊಂಡಿದ್ದ, ಅಂದು ಆಸ್ಪತ್ರೆಗೆ ದಾಖಲಾಗಿದ್ದ ಬಳಿಕ ಈತ ಚೇತರಿಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಮತ್ತೆ ತೀವ್ರ ಅಸ್ವಸ್ಥಗೊಂಡು ಈತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಪಾಂಡೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಆಯತಪ್ಪಿ ಹೊಳೆಗೆ ಬಿದ್ದು ಸಾವು

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಹೊಳೆಗೆ ಬಿದ್ದ ಯುವಕ ಮೃತಪಟ್ಟಿದ್ದಾರೆ. ಬಾರಕೂರು ಹೊಸಾಳ ಶಾಲೆ ಬಳಿ ಈ ದುರಂತ ನಡೆದಿದ್ದು, ನಾಗೇಂದ್ರ (24) ಮೃತಪಟ್ಟವರು.

ಮೀನುಗಾರಿಕಾ ದೋಣಿಯಲ್ಲಿ ಹುಟ್ಟುಹಾಕುತ್ತಿದ್ದ ಸಂದರ್ಭದಲ್ಲಿ ಭಾರೀ ಅಲೆ ಎದ್ದಿದ್ದು, ಇದೇ ವೇಳೆ ಇವರ ಜಲ್ಲು ತುಂಡಾಗಿ ಆಯ ತಪ್ಪಿ ಹೊಳೆಗೆ ಬಿದ್ದಿದ್ದು, ಈಜು ಕೂಡಾ ಸರಿಯಾಗಿ ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬ್ರಹ್ಮಾವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.