ಉಡುಪಿಯಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ನಿಗೆ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್, ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ಡಿಸೆಂಬರ್ 11ರಿಂದ 17ರವರೆಗೆ 41ನೇ ಕಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಪನ್ನು ಏರ್ಪಡಿಸಿದ್ದು, ಈ ನಿಟ್ಟಿನಲ್ಲಿ ಸರ್ವ ಸಿದ್ದತೆ ನಡೆಸುತ್ತಿದೆ.

ಶನಿವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಮತ್ತು ಸಂಘಟನೆಯ ಮಹಾ ಕಾರ್ಯದರ್ಶಿ ಕೆ ರಘುಪತಿ ಭಟ್, “ಚಾಂಪಿಯನ್ಶಿಪ್ 17ಕ್ಕಿಂತ ಕೆಳಗಿನ ಮತ್ತು 19ಕ್ಕಿಂತ ಕೆಳಗಿನ ವಿಭಾಗಗಳಲ್ಲಿ ನಡೆಯಲಿದೆ. ಸುಮಾರು 600 ಬ್ಯಾಡ್ಮಿಂಟನ್ ಆಟಗಾರರು ಮತ್ತು 100 ಮಂದಿ ತೀರ್ಪುಗಾರರು ಭಾಗವಹಿಸಲಿದ್ದಾರೆ. ಟೂರ್ನಿಯು ಜಿಲ್ಲಾ ಒಳಾಂಗಣ ಮೈದಾನದ  ನಾಲ್ಕು ಕೋರ್ಟುಗಳಲ್ಲಿ ಮತ್ತು ಮಣಿಪಾಲದ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಸಿಂಗಲ್ಸ್, ಡಬಲ್ಸ್ ಮತ್ತು ಮಿಕ್ಸ್ಡ್ ಡಬಲ್ಸ್ ವಿಭಾಗಗಳಲ್ಲಿ ನಡೆಯಲಿದೆ” ಎಂದು ತಿಳಿಸಿದರು.  ಈ ಟೂರ್ನಮೆಂಟಿನ ಒಟ್ಟು ವೆಚ್ಚ 1.2 ಕೋಟಿ ಹಾಗೂ ಬಹುಮಾನದ ಮೊತ್ತ ರೂ 6 ಲಕ್ಷ ಎಂದು ಅಂದಾಜಿಸಲಾಗಿದೆ.

ಉದ್ಘಾಟನೆ : ಇದೇ ವೇಳೆ ಅಂತರಾಜ್ಯ ತಂಡದ ಚಾಂಪಿಯನ್ ಶಿಪ್ ಡಿಸೆಂಬರ್ 11 ರಿಂದ ಆರಂಭವಾಗಿದ್ದು, ಟೂರ್ನಿಯನ್ನು ಭಾರತೀಯ ಬ್ಯಾಡ್ಮಿಂಟನ್ ಎಸೋಸಿಯೇಷನ್ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತ ಉದ್ಘಾಟಿಸಲಿದ್ದಾರೆ. ಅಂತರರಾಜ್ಯ ತಂಡ ಚಾಂಪಿಯನ್ಶಿಪ್ ಭಾನುವಾರ ಬೆಳಗ್ಗೆ 9 ಗಂಟೆಗೆ ಮಣಿಪಾಲ ಶಿಕ್ಷಣ ಮತ್ತು ಮೆಡಿಕಲ್ ಸಮೂಹದ ಮ್ಯಾನೇಜಿಂಗ್ ಡೈರೆಕ್ಟರ್ ರಂಜನ್ ಪೈ ಮಣಿಪಾಲದ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟಿಸಲಿದ್ದಾರೆ.  ಉಡುಪಿ ಜಿಲ್ಲೆಯ ಗ್ಲ್ಯಾನೀಶ್, ಗ್ಲ್ಯಾನ್ಸಿಯಾ ಪಿಂಟೋ, ಸಮಂತ್ ಕಿಡಿಯೂರು, ನೇಹಾ ಹರೀಶ್ ಮತ್ತು ನಿತಿನ್  ಚಾಂಪಿಯನ್ಶಿಪ್ಪಿನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ ಎಂದು ಭಟ್ ಹೇಳಿದ್ದಾರೆ.