`ಮಂಗಳೂರು ಜಂಕ್ಷನಲ್ಲಿ ಶೀಘ್ರ ರಿಕ್ಷಾ ಪ್ರೀಪೇಯ್ಡ್ ಕೌಂಟರ್ ಪುನರಾರಂಭ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣದಲ್ಲಿ ರಿಕ್ಷಾ ಪ್ರೀಪೇಯ್ಡ್ ಕೌಂಟರ್ ಪ್ರಾರಂಭಿಸಲು ಎಲ್ಲಾ ಸಿದ್ಧತೆ ನಡೆದಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ” ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಹೇಳಿದರು.

53ನೇ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಉತ್ತರಿಸಿದ ಅವರು, “ಈಗಾಗಲೇ ಇದಕ್ಕೆ ಎಲ್ಲಾ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ. ಸಾರಿಗೆ ಅಧಿಕಾರಿಗಳು ರಿಕ್ಷಾ ಪ್ರಯಾಣದರ ನಿಗದಿ ಪಡಿಸುವುದು ಮಾತ್ರ ಬಾಕಿಯಿದೆ. ನಿರ್ಧಾರ ಕೈಗೊಂಡ ತಕ್ಷಣ ಕೌಂಟರ್ ಆರಂಭಗೊಳ್ಳುತ್ತದೆ. ಈ ವ್ಯವಸ್ಥೆಯ ಭದ್ರತೆಯನ್ನು ಪ್ರತ್ಯೇಕ ಗುತ್ತಿಗೆಗೆ ನೀಡಲಾಗುವುದು. ಪೊಲೀಸರಿಂದ ಇದನ್ನು ನಿರ್ವಹಿಸುವುದು ಕಷ್ಟ ಸಾಧ್ಯ” ಎಂದರು.

“ಆರ್ಟಿಒ ಅಧಿಕಾರಿಗಳು ಟಿಕೆಟ್ ನೀಡದ ಬಸ್ಸುಗಳ ವಿರುದ್ಧ ಕಾರ್ಯಾಚರಣೆ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ. 16 ನಂಬ್ರದ ಸಿಟಿ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿಲ್ಲ. ಅಷ್ಟೇ ಅಲ್ಲ ಅಧಿಕ ಟಿಕೆಟ್ ದರ ವಸೂಲಿ ಮಾಡಲಾಗುತ್ತಿದೆ” ಎಂದು ಸಾರ್ವಜನಿಕರೊಬ್ಬರು ದೂರಿದರು. “ಕೊಣಾಜೆಗೆ ಸಂಚರಿಸುವ ಸುಮಾರು 25 ಬಸ್ಸುಗಳಿಗೆ ಕೊಣಾಜೆ ಗ್ರಾ ಪಂ.ವರೆಗೆ ತೆರಳಬೇಕೆಂದು ಪರವಾನಿಗೆ ನೀಡಲಾಗಿದೆ. ಆದರೆ ಬಸ್ಸುಗಳು ಅಲ್ಲಿಗೆ ತೆರಳುತ್ತಿಲ್ಲ” ಎಂದು ವ್ಯಕ್ತವಾದ ದೂರಿಗೆ “ಈ ಬಗ್ಗೆ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ ಕ್ರಮಕ್ಕೆ ಆಗ್ರಹಿಸಲಾಗುವುದು” ಎಂದರು.

“ಕೃಷ್ಣಾಪುರದ ಮಹಿಳಾ ಕಾಲೇಜು ಬಳಿ ಯುವಕರು ಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದು, ಯುವತಿಯರಿಗೆ ಚುಡಾಯಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಿ” ಎಂದು ಸಾರ್ವಜನಿಕರು ಕರೆ ಮಾಡಿದರು. “ಕೊಟ್ಟಾರ ಚೌಕಿ ಬಳಿ ಮೂರು ಶಿಕ್ಷಣ ಸಂಸ್ಥೆಗಳಿದ್ದು, ಒಂದೇ ಅವಧಿಯಲ್ಲಿ ತರಗತಿಗಳು ಬಿಡುತ್ತಿರುವುದರಿಂದ ಟ್ರಾಫಿಕ್ ಜಾಂ ಆಗುತ್ತಿದೆ” ಎಂದು ದೂರಿದರು. “ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು” ಎಂದು ಕಮಿಷನರ್ ಹೇಳಿದರು.

“ಪ್ರತೀ ಶಾಲಾ ಕಾಲೇಜುಗಳ ಬಳಿ ಪೊಲೀಸ್ ನಿಯೋಜನೆ ಸಾಧ್ಯವಿಲ್ಲ. ಸಂಬಂಧಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ ಕಮಿಷನರ್ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದು” ಎಂದು ಹೇಳಿದರು.