ಮಾಂಸಕ್ಕಾಗಿ ಗಬ್ಬದ ಹಸುವನ್ನೂ ಕಡಿದ ದುರುಳರು

ಮೊಗ್ರಾಲ್ ಹೊಳೆ ಬಳಿ ಕಂಡುಬಂದ ಗರ್ಭದಲ್ಲಿರುವ ಕರುವಿನ ಕಳೇಬರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಗರ್ಭಾವಸ್ಥೆಯಲ್ಲಿರುವ ಹಸುಗಳನ್ನೂ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಜಾಲ ಇರುವುದಾಗಿ ಕೇಳಿ ಬರುತ್ತಿರುವ ಊಹಾಪೆÇೀಪಗಳಿಗೆ ಇಂಬು ನೀಡುವಂತೆ ಎಸೆದ ಮಾಂಸದ ಮಧ್ಯೆ ಎಳೆ ಕರುವಿನ ಕಳೇಬರ ಪತ್ತೆಯಾಗಿದ್ದು, ಭಾರೀ ವಿವಾದ ಹಾಗೂ ಆತಂಕಕ್ಕೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ.

ಭಾನುವಾರ ಮೊಗ್ರಾಲ್ ಹೊಳೆ ಬದಿಯಲ್ಲಿ ಸ್ಥಳೀಯ ಹೊಳೆ ಸಂರಕ್ಷಣಾ ಸಮಿತಿ ಹಮ್ಮಿಕೊಂಡ ಶುಚೀಕರಣ ಚಟುವಟಿಕೆ ವೇಳೆ ಗಬ್ಬೆದ್ದು ನಾರುತ್ತಿರುವ ಕಸಗಳ ರಾಶಿಯಲ್ಲಿ ಎಳೆ ಕರುವಿನ ಕಳೇಬರ ದೊರಕಿವೆ. ರಸ್ತೆ ಬದಿಗಳಲ್ಲಿ ಮೇಯಲು ಬಿಡುತ್ತಿರುವ ಹಸುಗಳು ಕಾಣೆಯಾಗುತ್ತಿದ್ದು, ದನಗಳ್ಳರು ಅಪಹರಿಸಿ ಬಳಿಕ ಅಧಿಕ ಬೆಲೆಗೆ ಮಾಂಸಕ್ಕೆ ಬಳಸುತ್ತಿರುವುದಾಗಿ ಕೇಳಿ ಬರುತ್ತಿರುವ ದೂರುಗಳ ಮಧ್ಯೆ ಭಾನುವಾರ ಕಂಡುಬಂದ ಆತಂಕಾರಿ ದೃಶ್ಯ ದೂರುಗಳ ನಿಖರತೆಯನ್ನು ಪುಷ್ಠಿಗೊಳಿಸಿವೆ. ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಸೇತುವೆಯಿಂದ ಕೊಪ್ಪಳದವರೆಗೆ ರಸ್ತೆ ಬದಿ ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ವಾಕರಿಕೆ ಬರುವಷ್ಟು ದುರ್ಗಂಧ ಬೀರುವ ಮಾಲಿನ್ಯಗಳನ್ನು ಎಸೆಯುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿತ್ತು.

ಅಧಿಕೃತರು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ದಿವ್ಯ ನಿರ್ಲಕ್ಷ್ಯದಿಂದ ರಾತ್ರಿ ವೇಳೆ ವಾಹನಗಳಲ್ಲಿ ಆಗಮಿಸುವ ತಂಡಗಳು ಹೆದ್ದಾರಿಯ ಪಕ್ಕದಲ್ಲೇ ಮಾಂಸಗಳ ಅವಶೇಷಗಳನ್ನು ಎಸೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದರೂ ಯಾವುದೇ ಕ್ರಮ ಜರುಗಿಸದಿರುವುದು ಸಮಾಜ ಘಾತುಕರ ವರ್ತನೆ ಮಿತಿಮೀರಲು ಕಾರಣವಾಗಿದ್ದು, ಇನ್ನಾದರೂ ಮಾಂಸ ಸಹಿತ ಇತರ ಉತ್ಪನ್ನ ಅವಶೇಷಗÀಳ ವಿಲೇವಾರಿ ಸಹಿತ ಘಾತುಕ ಶಕ್ತಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.