ಮಂಗಳೂರು ರೈಲು ನಿಲ್ದಾಣದಲ್ಲಿ ಪ್ರೀಪೇಯ್ಡ್ ಕೌಂಟರ್ ಪುನರಾರಂಭ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣದಲ್ಲಿ ಕೊನೆಗೂ ಪ್ರೀಪೇಯ್ಡ್ ಆಟೋರಿಕ್ಷಾ ಕೌಂಟರ್ ಪುನರಾರಂಭಗೊಂಡಿದೆ. ಈ ರೈಲು ನಿಲ್ದಾಣದ ಮೂಲಕ ತೆರಳುತ್ತಿದ್ದ ಪ್ರಯಾಣಿಕರು ಈ ಸೇವೆ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ.

ತಮ್ಮ ವೈದ್ಯಕೀಯ ಚಿಕಿತ್ಸೆಗಾಗಿ ಹಲವು ಬಾರಿ ಕಾರವಾರಕ್ಕೆ ತೆರಳುತ್ತಿದ್ದ ತಲಪಾಡಿ ನಿವಾಸಿ ಇಬ್ರಾಹಿಂ ಅವರು ಇದೀಗ ಇಲ್ಲಿನ ಪ್ರೀಪೇಯ್ಡ್ ಕೌಂಟರ್ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ನಗರಕ್ಕೆ ಬಾಡಿಗೆ ಬರಲು ಸತಾಯಿಸುತ್ತಿದ್ದ

ರಿಕ್ಷಾ ಚಾಲಕರಿಂದ ನೊಂದು ಇವರು ಸುಮಾರು 500 ಮೀಟರ್ ದೂರ ನಡೆದು ಬಸ್ಸು ತಲುಪುತ್ತಿದ್ದರು. ಸದ್ಯಕ್ಕೆ ಮುಂಜಾನೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಈ ಪ್ರೀಪೇಯ್ಡ್ ಕೌಂಟರ್ ತೆರೆದಿರುತ್ತದೆ.

2015ರ ಜುಲೈ 15ರಲ್ಲಿ ಈ ಪ್ರೀಪೇಯ್ಡ್ ಕೌಂಟರ್ ಆರಂಭಗೊಂಡಿತ್ತು. ಆದರೆ ರೈಲ್ವೇ ಇಲಾಖೆ ಇದಕ್ಕೆ ವಿದ್ಯುತ್ ಸಂಪರ್ಕ ನೀಡದ ಕಾರಣ ಅದು ಸ್ಥಗಿತಗೊಂಡಿತ್ತು. ಕೇವಲ 18 ದಿನ ಮಾತ್ರ ಅದು ಕೆಲಸ ಮಾಡಿತ್ತು. ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಆಟೋ ಚಾಲಕರಿಗೆ ಲಗಾಮು ಹಾಕುವ ನಿಟ್ಟಿನಲ್ಲಿ ಈ ಪ್ರೀಪೇಯ್ಡ್ ಕೌಂಟರ್ ಆರಂಭಗೊಂಡಿರುವುದು ಹೆಚ್ಚು ಸೂಕ್ತವಾಗಿದೆ ಎಂದು ಜನತೆ ಅಭಿಪ್ರಾಯಪಟ್ಟಿದ್ದಾರೆ.

ಇದೀಗ ಆಟೋರಿಕ್ಷಾ ಚಾಲಕರ ಮುಖಂಡ ಗಣೇಶ್ ಎಂಬವರು ಪ್ರೀಪೇಯ್ಡ್ ಕೌಂಟರ್ ಆರಂಭಿಸಲು ಮುಂದೆ ಬಂದಿದ್ದು, ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ನಿನಲ್ಲಿ 2017ರ ಜುಲೈ 31ರಿಂದ ಇದು ಕಾರ್ಯಾರಂಭ ಮಾಡಿದೆ.

“ಸದ್ಯಕ್ಕೆ ವಿದ್ಯುತ್ತಿನ ಸಂಪರ್ಕ ಇಲ್ಲದ ಕಾರಣ ನಾವು ಬೆಳಿಗ್ಗೆ 7ರಿಂದ ರಾತ್ರಿ 7 ಗಂಟೆಯವರೆಗೆ ಈ ಸೇವೆ ನೀಡುತ್ತಿದ್ದೇವೆ. ಇಲ್ಲಿಗೆ 24 ಗಂಟೆಗಳ ವಿದ್ಯುತ್ ಸಂಪರ್ಕ ಬೇಕಾಗಿದೆ. ಅಲ್ಲದೆ ಕೌಂಟರಿಗೆ ಇಬ್ಬರು ಸಿಬ್ಬಂದಿಗಳ ನೇಮಕವಾಗಬೇಕಾಗಿದೆ” ಎಂದು ಗಣೇಶ್ ಹೇಳಿದ್ದಾರೆ.

ಇಲ್ಲಿನ ಕೌಂಟರಿನಲ್ಲಿ ಪ್ರಯಾಣದರದ ಪಟ್ಟಿಯನ್ನು ಲಗತ್ತಿಸಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹನುಮಂತಯ್ಯ ತಿಳಿಸಿದ್ದಾರೆ.