ಪತಿಗೆ ಮೊದಲೇ ಮದುವೆಯಾಗಿದೆ

ಸಾಂದರ್ಭಿಕ ಚಿತ್ರ

ಪ್ರ : ನಾನು ಒಂದು ಪ್ಯಾಕೆಜಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಂಪೆನಿಯಲ್ಲೇ ಕೆಲಸ ಮಾಡುವ ಡ್ರೈವರ್ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಿದ್ದರು. ನನಗೂ ಅವರನ್ನು ನೋಡಿದರೆ ಇಷ್ಟವಾಗುತ್ತಿತ್ತು. ಅವರು ಬೇರೆ ಕೆಲಸದ ಜೊತೆ ನಮ್ಮನ್ನೆಲ್ಲ ಬಸ್‍ಸ್ಟಾಂಡಿಗೆ ಬಿಡುವುದೂ ಮಾಡುತ್ತಿದ್ದರು. ಕೆಲವೊಮ್ಮೆ ಅವರು ನಮ್ಮ ಮನೆಯ ತನಕವೂ ಬಿಡುತ್ತಿದ್ದರು. ಹೀಗೇ ನಮ್ಮ ಮಧ್ಯೆ ಪ್ರೀತಿ ಬೆಳೆಯಿತು. ನಾನು ಮೀನುಗಾರ ಸಮಾಜಕ್ಕೆ ಸೇರಿದವಳು. ಅವರು ಹುಬ್ಬಳ್ಳಿಯವರು. ಮನೆಯಲ್ಲಿ ತಂದೆ-ತಾಯಿ ಜೊತೆ ಅಷ್ಟೊಂದು ಸರಿ ಇಲ್ಲದ ಕಾರಣ ಇಲ್ಲಿ ಬಂದು ಕೆಲಸಕ್ಕೆ ಸೇರಿ ಕೊಂಡಿದ್ದಾರೆಂದು ನನಗೆ ಹೇಳಿದ್ದರು. ಅವರು ಲಿಂಗಾಯತರು. ಮೊದಮೊದಲು ನಮ್ಮ ಪ್ರೀತಿಗೆ ನಮ್ಮ ಮನೆಯವರು ಅಡ್ಡಿಪಡಿಸಿದರು. ಕೊನೆಗೆ ಇವರೇ ನಮ್ಮ ಮನೆಗೆ ಬಂದು ಹೋಗಿ ಮಾಡಿ ನಮ್ಮ ಮನೆಯವರ ಮನಸ್ಸು ಗೆದ್ದರು. ಸಣ್ಣ ರೀತಿಯಲ್ಲಿ ಮದುವೆಯನ್ನೂ ಮಾಡಿಕೊಟ್ಟರು. ನಮ್ಮ ಮದುವೆಗೆ ಅವರ ಕಡೆಯವರು ಯಾರೂ ಬಂದಿರಲಿಲ್ಲ. ನನಗೊಬ್ಬಳು ತಂಗಿ ಮಾತ್ರ ಇರುವುದರಿಂದ ಅವರೂ ನಮ್ಮ ತವರು ಮನೆಯಲ್ಲೇ ಬಂದು ಉಳಿದರು. ಮನೆಯ ಗಂಡುಮಗನಂತೆ ನನ್ನ ಹೆತ್ತವರಿಗೆ ಸಹಕಾರಿಯಾಗಿಯೇ ಇದ್ದಾರೆ. ಸಂಬಳ ಬಂದ ಕೂಡಲೇ ಅವರು ತಿಂಗಳಿಗೆ ಒಮ್ಮೆಯಾದರೂ ಊರಿಗೆ ಹೋಗಿ ಬರುತ್ತಿದ್ದರು. ಆಸ್ತಿ ವಿಚಾರದಲ್ಲಿ ಲಾಯರ್ ಕಾಣಲಿಕ್ಕೆ ಇದೆ ಅನ್ನುತ್ತಿದ್ದರು. ಪ್ರತೀ ತಿಂಗಳು ಅವರ ಸಂಬಳದ ಅರ್ಧ ಭಾಗ ಬರುವಾಗ ಖಾಲಿಯಾಗಿರುತ್ತಿತ್ತು. ಕೇಳಿದರೆ ಲಾಯರಿಗೆ ಕೊಟ್ಟೆ ಅನ್ನುತ್ತಿದ್ದರು. ಸತ್ಯ ಏನೆಂದರೆ ಅವರಿಗೆ ಅಲ್ಲಿ ಮದುವೆಯಾಗಿ ಎರಡು ಮಕ್ಕಳೂ ಇದ್ದಾರೆ. ಅವರನ್ನು ನೋಡಿ ಹಣ ಕೊಡಲೇ ಅವರು ಪ್ರತೀ ತಿಂಗಳು ಹೋಗುವುದು. ಇದು ನನ್ನ ತಂದೆಯ ಜೊತೆ ಕೆಲಸ ಮಾಡುತ್ತಿರುವ ಅವರ ಊರಿನವರೊಬ್ಬರಿಂದ ಅಕಸ್ಮಾತ್ತಾಗಿ ಗೊತ್ತಾಯಿತು. ಮೊದಲು ಇವರು ಅಲ್ಲಗಳೆದರೂ ಕೊನೆಗೆ ಮೊದಲ ಮದುವೆಯನ್ನು ಒಪ್ಪಿಕೊಂಡಿದ್ದಾರೆ. ನನಗೆ ಇದರಿಂದ ತುಂಬಾ ಬೇಸರವಾಗಿದೆ. ನಾನೂ ಈಗ ಆರು ತಿಂಗಳ ಬಸುರಿ. ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಆದರೂ ಇವರ ಜೊತೆ ಬಾಳಲು ಮನಸ್ಸಿಗೆ ತುಂಬಾ ಕಷ್ಟವಾಗುತ್ತಿದೆ. ನಾನೇನು ಮಾಡಲಿ?

: ವರನ ಪೂರ್ವಾಪರ ವಿಚಾರಿಸದೇ ಅವನ ಬಣ್ಣದ ಮಾತಿಗೆ ಬಲೆ ಬೀಳುವ ಹೆಣ್ಣುಮಕ್ಕಳು ಮತ್ತು ಅವರ ಪಾಲಕರಿಗೆ ಪಾಠವಾಗಬೇಕು ನಿಮ್ಮ ಅನುಭವ. ಅವನಿಗೇನು, ಊರಿಗೆ ಹೋದರೆ ಒಂದು ಸಂಸಾರ, ಇಲ್ಲಿ ತನ್ನ ಎಲ್ಲ ಬೇಕು ಬೇಡಗಳನ್ನು ನೋಡಿಕೊಳ್ಳಲು ಹೆಂಡತಿ ಮತ್ತು ನೆಲೆನಿಲ್ಲಲು ಒಂದು ಮನೆ ಸಿಕ್ಕಿದರೆ ಯಾರಿಗೆ ಬೇಡ? ಅಂತೂ ನೀವು ಮೋಸ ಹೋದಿರಿ. ಈಗ ಅವನ ಜೊತೆ ಬಾಳಲೂ ಮನಸ್ಸು ಬರದೇ ಬಿಡಲೂ ಆಗದೇ ಒದ್ದಾಡುವಂತಾಗಿದೆ. ಪೊಲೀಸ್ ಕಂಪ್ಲೇಂಟ್ ಕೊಡಬಹುದು. ಆದರೆ ಇದರಿಂದ ಅವನಿಗೆ ಮಾತ್ರ ಶಿಕ್ಷೆಯಾಗುವುದಲ್ಲ, ನೀವೂ ಮತ್ತು ಅವನ ಮೊದಲ ಹೆಂಡತಿ, ಮಕ್ಕಳೂ ಇದರಿಂದ ಬವಣೆ ಅನುಭವಿಸಬೇಕಾಗುತ್ತದೆ. ಈಗ ನಿಮಗಿರುವ ದಾರಿ ಎರಡೇ. ಒಂದೇ ಧೈರ್ಯದಿಂದ ಅವನಿಂದ ದೂರವಾಗಿ ವಕೀಲರ ಸಹಾಯದಿಂದ ಅವನಿಂದ ಪರಿಹಾರ ಪಡೆದು ಸ್ವತಂತ್ರವಾಗಿ ಬಾಳುವುದು ಇಲ್ಲಾ ಅವನನ್ನು ಬಿಟ್ಟಿರಲು ಸಾಧ್ಯವೇ ಇಲ್ಲದಿದ್ದರೆ ಅವನ ಜೊತೆಯೇ ಎರಡನೆಯ ಹೆಂಡತಿಯಾಗಿ ಹೊಂದಾಣಿಕೆಯಿಂದ ಬಾಳುವುದು. ಯಾವುದಕ್ಕೂ ತಾಳ್ಮೆಯಿಂದ ನೀವು ನಿಮ್ಮ ಹೆತ್ತವರ ಜೊತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಿ.

 

LEAVE A REPLY