ಪ್ರವೀಣ್ ಕೊಲೆ ಆರೋಪಿಗಳು ಕಾರವಾರ ಜೈಲಿಗೆ ಸ್ಥಳಾಂತರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಹಿರಿಯಡ್ಕ ಸಮೀಪದ ಓಂತಿಬೆಟ್ಟು ಗ್ರಾಮದ ವರ್ವಾಡಿ ನಿವಾಸಿ, ರೌಡಿ ಶೀಟರ್ ಪ್ರವೀಣ್ ಕುಲಾಲ್ ಕೊಲೆ ಪ್ರಕರಣದ ಮೂವರು ಆರೋಪಿಗಳ ಪೈಕಿ ಪೊಲೀಸ್ ಕಸ್ಟಡಿಯಲ್ಲಿದ್ದ ಪುತ್ತಿಗೆ ಸಂತೋಷ್ ಶೇರಿಗಾರ್ ಯಾನೆ ಪುತ್ತಿಗೆ ಸಂತು ಮತ್ತು ಓಂತಿಬೆಟ್ಟು ಗ್ರಾಮದ ಮಾಂಬೆಟ್ಟು ಸಂತೋಷ್ ಶೆಟ್ಟಿ ಇವರಿಬ್ಬರನ್ನು ಬುಧವಾರ ರಾತ್ರಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಕೋರ್ಟ್ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇವರಿಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜೈಲಿಗೆ ಹಾಕಲಾಗಿದೆ. ಇನ್ನೊಬ್ಬ ಆರೋಪಿ ಪಡುಬಿದ್ರಿ ಸಮೀಪ ಸಮೀಪದ ಪಲಿಮಾರು ನಿವಾಸಿ ಲತೇಶ್ ಪೂಜಾರಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರೌಡಿ ಶೀಟರ್ ವರ್ವಾಡಿ ಪ್ರವೀಣ್ ಕುಲಾಲನ್ನು ಡಿಸೆಂಬರ್ 19ರಂದು ಮಧ್ಯಾಹ್ನ ಹಿರಿಯಡ್ಕ ಸಮೀಪದ ಕೋಟ್ನಕಟ್ಟೆಯ ದೀಯಾ ಬಾರ್ ಎದುರು ಆರೋಪಿಗಳಾದ ಹಿರಿಯಡ್ಕ ಸಮೀಪದ ಪುತ್ತಿಗೆ ನಿವಾಸಿ, ಸಂತೋಷ್ ಶೇರಿಗಾರ್ ಯಾನೆ ಪುತ್ತಿಗೆ ಸಂತು, ಪಡುಬಿದ್ರಿ ಸಮೀಪದ ಪಲಿಮಾರು ನಿವಾಸಿ ಲತೇಶ್ ಪೂಜಾರಿ ಹಾಗೂ ಓಂತಿಬೆಟ್ಟು ಗ್ರಾಮದ ಮಾಂಬೆಟ್ಟು ನಿವಾಸಿ ಸಂತೋಷ್ ಶೆಟ್ಟಿ ಸೇರಿಕೊಂಡು ತಲವಾರಿನಿಂದ ಕಡಿದು ಕೊಲೆಗೈದಿದ್ದರು. ಕೊಲೆ ಸಂದರ್ಭದಲ್ಲಿ ಪ್ರವೀಣ್ ಬಾರ್ ಸಮೀಪದ ಅಂಗಡಿಯೊಂದರಲ್ಲಿದ್ದ ಸಿಯಾಳ ಕೆತ್ತುವ ಕತ್ತಿಯನ್ನು ಬೀಸಿದ್ದ ಪರಿಣಾಮ ಪುತ್ತಿಗೆ ಸಂತು ಮತ್ತು ಲತೇಶ್ ಗಾಯಗೊಂಡು ಉಡುಪಿ ಜಿಲ್ಲಾ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಪೊಲೀಸ್ ಕಸ್ಟಡಿಯಲ್ಲಿ ದಾಖಲಾಗಿದ್ದು, ಲತೇಶ್ ಎಡಕೈಗೆ ಗಂಭೀರ ಗಾಯಗೊಂಡು ಇನ್ನೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪುತ್ತಿಗೆ ಸಂತುವನ್ನು ಕೊಲೆ ನಡೆದ ಮರುದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದ ಹಿರಿಯಡ್ಕ ಪೊಲೀಸರು, ಕೊಲೆ ನಡೆದ ನಂತರ ಪರಾರಿಯಾದ ಮಾಂಬೆಟ್ಟು ಸಂತೋಷನನ್ನು ಕಳೆದ ಬುಧವಾರ ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿ, ಹಿರಿಯಡ್ಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಿಬ್ಬರನ್ನು ಏಳು ದಿನಗಳ ಕಾಲ ಹಿರಿಯಡ್ಕ ಪೊಲೀಸರು ಕಸ್ಟಡಿಯಲ್ಲಿಟ್ಟು, ಕೊಲೆ ಬಳಸಿದ್ದ ತಲವಾರನ್ನು ವಶಪಡಿಸಿಕೊಂಡಿದ್ದರು.

ಏಳು ವರ್ಷಗಳ ಹಿಂದೆ ಹರಿಖಂಡಿಗೆ ಸಮೀಪದ ದೊಂಡ್ಡೆರಂಗಡಿಯ ಮರದ ವ್ಯಾಪಾರಿ ಯತೀಶ್ ಶೆಟ್ಟಿಯನ್ನು ಕೊಲೆಗೈದು ಜೀವಾವಧಿ ಶಿಕ್ಷೆಗೊಳಗಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಹಿರಿಯಡ್ಕ ಸಮೀಪದ ಗುಡ್ಡೆಯಂಗಡಿ ಸಂತು ಯಾನೆ ಸಂತೋಷ್ ಪೂಜಾರಿ ಪ್ರವೀಣ್ ಕೊಲೆ ಸೂತ್ರಧಾರಿಯಾಗಿದ್ದು, ಆತನ ವಿರುದ್ಧ ಹಿರಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಗುಡ್ಡೆಯಂಗಡಿ ಸಂತು ವಿರುದ್ಧ ಜೈಲಿನಿಂದಲೇ ಬೆದರಿಕೆ ಸಹಿತ ಏಳು ಪ್ರಕರಣಗಳಿವೆ. ಕೊಲೆಯಾದ ಯತೀಶ್ ಶೆಟ್ಟಿ ಕಡೆಯವರೊಂದಿಗೆ ಪ್ರವೀಣ್ ಸೇರಿಕೊಂಡು ಡೀಲ್ ಕುದರಿಸಿದ್ದಾನೆ ಎನ್ನಲಾಗಿದ್ದು, ಸಂತು ಕೋರ್ಟಿಗೆ ಬರುವ ವೇಳೆ ಆತನ ಮೇಲೆ ದಾಳಿ ನಡೆಸಿ ಕೊಲೆಗೈದು ಉಡುಪಿಯಲ್ಲಿ ಡಾನ್ ಆಗುವ ಸಂಚು ರೂಪಿಸಿರುವುದು ಸಂತುಗೆ ಗೊತ್ತಾಗಿತ್ತೆನ್ನಲಾಗಿದೆ. ಇದರಿಂದ ಬೆದರಿದ ಸಂತೋಷ್ ಪೂಜಾರಿಯು ರೌಡಿಶೀಟರ್ ಪ್ರವೀಣ್ ಕುಲಾಲನ್ನು ಕೊಲೆಗೈಯ್ಯಲು ತನ್ನ ಚಿಕ್ಕಮ್ಮ ಮಗನಾದ ಲತೇಶ್, ಪುತ್ತಿಗೆ ಸಂತು ಹಾಗೂ ಮಾಂಬೆಟ್ಟು ಸಂತೋಷನನ್ನು ಡಿಸೆಂಬರ್ 14ರಂದು ಬೆಳಗಾವಿ ಜೈಲಿಗೆ ಸಂತು ಕರೆಸಿಕೊಂಡಿದ್ದು, ಕೂಡಲೇ ಪ್ರವೀಣನ ಕೊಲೆ ನಡೆಸಲು ಸಂತು ತಾಕೀತು ಮಾಡಿದ್ದಾನೆ ಎಂಬುದನ್ನು ಬಂಧಿತ ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.