ಕಾನೂನಿನ ಅರಿವಿಲ್ಲದ ಪ್ರತಾಪ ಸಿಂಹ

ಸಚಿವ ರೈ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಹೂಣಸೂರಲ್ಲಿ ಹನುಮಜಯಂತಿ ದಿನದಂದು ಪೊಲೀಸರ ಸೂಚನೆಯನ್ನೂ ಧಿಕ್ಕರಿಸಿ ಕಾರು ಚಲಾಯಿಸುವ ಮೂಲಕ ಕಾನೂನು ಉಲ್ಲಂಘಿಸಿರುವ ಸಂಸದ ಪ್ರತಾಪ ಸಿಂಹ ಅವರು ಕಾನೂನಿಗಿಂತ ಎತ್ತರಕ್ಕೆ ಹೋಗಿದ್ದಾರೆ. ಒಬ್ಬ ಲೋಕಸಭಾ ಸದಸ್ಯಗೆ ಕಾನೂನಿನ ಅರಿವಿಲ್ಲವೆಂದಾದರೆ ಜನಸಾಮಾನ್ಯರ ಸ್ಥಿತಿ ಏನು” ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಸಂಸದರು ಬ್ಯಾರಿಕೇಡ್ ಮುರಿದು ಹೋಗಿರುವ ವಿಡಿಯೋ ವೈರಲ್ ಆಗಿದೆ. ಸಂಸದನ ದರ್ಪವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸರಕಾರಿ ಗಾಡಿಯ ಅಧಿಕೃತ ಚಾಲಕ ಇರುವಾಗ ಅವರನ್ನು ಬಿಟ್ಟು ಇನ್ನೊಬ್ಬ ಡ್ರೈವಿಂಗ್ ಸೀಟಿನಲ್ಲಿ ಕುಳಿತುಕೊಳ್ಳುವುದೇ ಕಾನೂನಿಗೆ ವಿರೋಧವಾಗಿದೆ. ಅಲ್ಲದೆ ಆ ಸೀಟಿನಲ್ಲಿ ಕುಳಿತು ಬ್ಯಾರಿಕೇಡ್ ಮುರಿದು ಹೋಗುವುದೆಂದರೆ ದೊಡ್ಡ ಅಪರಾಧ ಎಸಗಿದಂತೆ” ಎಂದು ಸಚಿವರು ಹೇಳಿದರು.

“ಒಂದು ವೇಳೆ ಸಚಿವ ರಮಾನಾಥ ರೈ ಅದೇ ಡ್ರೈವಿಂಗ್ ಸೀಟಿನಲ್ಲಿ ಕುಳಿತು ಕಾರು ಚಲಾಯಿಸುತ್ತಿದ್ದರೆ ಅದು ಇನ್ನಷ್ಟು ವೈರಲ್ ಆಗಿ ದೆಹಲಿ ಚಾನೆಲಿನಲ್ಲಿ ಬರುತ್ತಿತ್ತು. ಪ್ರತಾಪ ಸಿಂಹನಂತಹ ಸಂಸದರಿಗೆ ಸಮಾಜ ಯಾವುದೇ ಕಾಲದಲ್ಲೂ ಮಣೆ ಹಾಕಬಾರದು” ಎಂದು ಆಕ್ರೋಶ ಭರಿತರಾಗಿ ಹೇಳಿದರು.

ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ನಾನು ವಿರೋಧಿಸುತ್ತೇನೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರ ಶಿಷ್ಯರು ಮಾತ್ರ ಧರ್ಮದ ಹೆಸರಿನಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರ ವಿರುದ್ಧ ರೈ ಹರಿಹಾಯ್ದರು.