ಪ್ರಮೋದ್ ಬಿಜೆಪಿ ಸೇರಲಿದ್ದಾರೆಯೇ ?

ಟಿಪ್ಪು ಜಯಂತಿ ಸಮಾರಂಭಕ್ಕೆ ಗೈರಾದಂದಿನಿಂದ ವದಂತಿ

  • ವಿಶೇಷ ವರದಿ

ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್  ಬಿಜೆಪಿ ಸೇರಲಿದ್ದಾರೆಯೇ ? ಸಚಿವರು ಶುಕ್ರವಾರ ಜಿಲ್ಲಾಡಳಿತ ಆಯೋಜಿಸಿದ್ದ ಟಪ್ಪು ಜಯಂತಿ ಸಮಾರಂಭಕ್ಕೆ ಗೈರು ಹಾಜರಾದಂದಿನಿಂದ ಹೀಗೊಂದು ವದಂತಿ ಹರಿದಾಡುತ್ತಿದೆ. ಸಚಿವರ ಅಧಿಕೃತ ಪ್ರವಾಸ ವಿವರದಲ್ಲಿ ಅವರು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಹಾಜರಿರುವರೆಂದು ಹೇಳಲಾಗಿತ್ತಾದರೂ ಜಿಲ್ಲಾಡಳಿತ ಸಂಕೀರ್ಣಕ್ಕೆ ಅವರು ಕಾರ್ಯಕ್ರಮ ಮುಗಿದ ನಂತರವಷ್ಟೇ ಬೇರೊಂದು ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.

ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು 2015ರಲ್ಲಿ ಆರಂಭಿಸಿದಂದಿನಿಂದ ಆಗ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್  ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಗೋಜಿಗೆ ಹೋಗಿಲ್ಲ.

ಅಕ್ಟೋಬರ್ 16ರಂದು ಉಡುಪಿಯ ಐಬಿಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್  ಹಾಗೂ ಇತರ ಬಿಜೆಪಿ ನಾಯಕರನ್ನು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪ್ರಮೋದ್ ಭೇಟಿಯಾಗಿದ್ದರಲ್ಲದೆ ಅವರೊಂದಿಗೆ ಚಹಾ ಸೇವಿಸಿ ಉಭಯ ಕುಶಲೋಪರಿ ವಿಚಾರಿಸಿದ್ದರು. ತಾವು ಐಬಿಯಲ್ಲಿದ್ದಾಗ ಬಿಜೆಪಿ ನಾಯಕರೂ ಅಲ್ಲಿದ್ದುದರಿಂದ ಇದೊಂದು ಸೌಜನ್ಯದ ಭೇಟಿಯಷ್ಟೇ ಎಂದು ಪ್ರಮೋದ್ ನಂತರ ಸ್ಪಷ್ಟಪಡಿಸಿದ್ದರು.

ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗೈರಾಗಿದ್ದನ್ನು ಸಮರ್ಥಿಸಿದ ಅವರು “ಜಿಲ್ಲಾ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕೆಂದು ನಿಯಮವಿಲ್ಲ. ಅಂತೆಯೇ ತಾನು  ಕಿತ್ತೂರು ರಾಣಿ ಚೆನ್ನಮ್ಮ, ಮಹರ್ಷಿ ವಾಲ್ಮೀಕಿ, ಭಗೀರಥ ಹಾಗೂ ಕೆಂಪೇಗೌಡ ಜಯಂತಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿಲ.್ಲ ಆಗ ಯಾರೂ ಪ್ರಶ್ನಿಸಿರಲಿಲ್ಲ” ಎಂದು ಪ್ರಮೋದ್ ಹೇಳಿದ್ದಾರೆ.

ಆದರೆ ಇದೀಗ ಪ್ರಮೋದ್ ಮಧ್ವರಾಜ್ ಸುತ್ತ ಹರಡಿಕೊಂಡಿರುವ ವದಂತಿ ಆಶ್ಚರ್ಯ ತರುವಂತಹುದ್ದೇನಲ್ಲ. ಅವರ ತಾಯಿ, ರಾಜ್ಯದ ಪ್ರಪ್ರಥಮ ಕ್ಯಾಬಿನೆಟ್ ದರ್ಜೆಯ ಸಚಿವೆ ಮನೋರಮಾ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷದಂದ ಮೂರು ಬಾರಿ ಉಡುಪಿಯಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರೂ ಮುಂದೆ ಬಿಜೆಪಿ ಸೇರಿ 2004ರಲ್ಲಿ ಉಡುಪಿಯಿಂದ ಲೋಕಸಭಾ ಚುನಾವಣೆ ಗೆದ್ದಿದ್ದರು. ಆದರೆ ಯುಪಿಎ ಸರಕಾರದ ವಿರುದ್ಧ ಬಿಜೆಪಿ ಮಂಡಿಸಿದ್ದ  ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ಸಂದರ್ಭ ಗೈರಾಗಿದ್ದ ಮನೋರಮಾರನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿತ್ತು.  2012ರಲ್ಲಿ ಅವರು ಮತ್ತು ಬಿಜೆಪಿ ಸೇರಿದ್ದರು.