ಜೆಡಿಎಸ್ಸಿನಲ್ಲಿ `ಸೂಟ್ಕೇಸ್ ಸಂಸ್ಕøತಿ’ ನಂತರ ಇದೀಗ `ಬಕೆಟ್ ಸಂಸ್ಕøತಿ’ ವಿರುದ್ಧ ರೇವಣ್ಣ ಪುತ್ರನ ಆವಾಜ್

ಬೆಂಗಳೂರು : ಇತ್ತೀಚೆಗಷ್ಟೇ ತಮ್ಮ `ಸೂಟ್ಕೇಸ್ ಸಂಸ್ಕøತಿ’ ಹೇಳಿಕೆಯಿಂದ ಜೆಡಿ(ಎಸ್) ಪಕ್ಷಕ್ಕೆ ಮುಜುಗರವುಂಟು ಮಾಡಿದ್ದ ಪಕ್ಷಾಧ್ಯಕ್ಷ ಹೆಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇದೀಗ `ಬಕೆಟ್ ಸಂಸ್ಕøತಿ’ ಹೇಳಿಕೆ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ರಾಜರಾಜೇಶ್ವರಿಯಲ್ಲಿ ಪಕ್ಷ ಕಾರ್ಯಕರ್ತರ ಸಭೆಯೊಂದನ್ನುದ್ದೇಶಿಸಿ ಇತ್ತೀಚೆಗೆ ಮಾತನಾಡಿದ ಪ್ರಜ್ವಲ್ ತಾವು ಈ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿರುವುದನ್ನು ಪರೋಕ್ಷವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.

“ಕೆಲವು ಜನರಿಗೆ ನನ್ನ ರಾಜಕೀಯ ಪ್ರಗತಿಯಿಂದ ಅಭದ್ರತೆ ಕಾಡುತ್ತಿದೆ. ಅವರ ಭಟ್ಟಂಗಿ ಸಂಸ್ಕøತಿಗೆ ನಾನು ಅಂತ್ಯ ಹಾಡುವೆ ಎಂಬ ಭಯ ಅವರಿಗೆ. ಪಕ್ಷದಲ್ಲಿ ಭ್ರಷ್ಟಾಚಾರ ಹಾಗೂ ಆಕ್ರಮಗಳಿಗೆ ನಾನು ಆಸ್ಪದ ನೀಡುವುದಿಲ್ಲವೆಂದು ಅವರಿಗೆ ತಿಳಿದಿರುವುದರಿಂದ ಅವರು ನನ್ನನ್ನು ದುರ್ಬಲಗೊಳಿಸಲು ಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ” ಎಂದು ಸಭೆಯಲ್ಲಿ ಮಾತನಾಡಿದ ಪ್ರಜ್ವಲ್ ಹೇಳಿದ್ದಾರೆ.

ತಮ್ಮ ಜುಲೈ 7ರ ಭಾಷಣ ವಿವಾದ ಸೃಷ್ಟಿಸಿದ್ದನ್ನು ಉಲ್ಲೇಖಿಸುತ್ತಾ “ಕಳೆದ ಏಳು ವರ್ಷಗಳಿಂದ ನಾನು ಶ್ರಮ ವಹಿಸಿ ಬೆಳೆಸಿದ್ದ ವರ್ಚಸ್ಸಿಗೆ ನನ್ನ ವಿರೋಧಿಗಳು ಹಾನಿಯುಂಟು ಮಾಡಲು ಬಯಸಿದ್ದಾರೆ” ಎಂದು ಆರೋಪಿಸಿದರು.