ಗಂಡನಿಗೆ ಗಾಸಿಪ್ ಮಾಡುವ ಅಭ್ಯಾಸ

Whisper Words

ಪ್ರ : ನಾವಿಬ್ಬರೂ ಶಿಕ್ಷಿತರು. ಒಳ್ಳೆಯ ಉದ್ಯೋಗದಲ್ಲಿ ಇದ್ದೇವೆ. ಎರಡು ಮಕ್ಕಳಿರುವ ಯಾವುದಕ್ಕೂ ಕೊರತೆಯಿರದ ಸಂಸಾರ ನಮ್ಮದು. ಆದರೆ ಒಂದೇ ಸಮಸ್ಯೆಯೆಂದರೆ ನನ್ನ ಗಂಡನಿಗೆ ಒಬ್ಬರ ವಿಷಯವನ್ನು ಇನ್ನೊಬ್ಬರ ಹತ್ತಿರ ಹೇಳುವ ಅಭ್ಯಾಸವಿರುವುದರಿಂದ ನಾನು ಅನೇಕ ಬಾರಿ ಮುಜುಗರಕ್ಕೆ ಒಳಗಾಗಿದ್ದೇನೆ. ಗಂಡ ಎದುರಿಗೆÉ ಎಲ್ಲರ ಜೊತೆ ಚೆನ್ನಾಗಿ ಮಾತಾಡಿದರೂ ಅವರಿಲ್ಲದಾಗ ಅವರ ಬಗ್ಗೆ ಬೇರೆಯವರ ಹತ್ತಿರ ಹಗುರವಾಗಿ ಏನಾದರೂ ಹೇಳಿಬಿಡುತ್ತಾರೆ. ಯಾರಾದರೂ ತಮ್ಮ ಕಷ್ಟವನ್ನು ನಾವು ಆಪ್ತರು ಅಂತ ನಮ್ಮಲ್ಲಿ ಹೇಳಿಕೊಂಡರೆ ನಮ್ಮವರು ಎಲ್ಲರ ಹತ್ತಿರವೂ ಅದನ್ನು ಹೇಳಿಬಿಡುತ್ತಾರೆ. ನನ್ನ ಬಗ್ಗೆಯೂ ಕುಟುಂಬದವರ ಹತ್ತಿರ ಬೇಡದಿದ್ದು ಹೇಳಿ ಅನೇಕ ಬಾರಿ ನನಗೆ ನೋವುಂಟುಮಾಡಿದ್ದಾರೆ. ಅದನ್ನೂ ನಾನು ಸಹಿಸಿಕೊಂಡಿದ್ದೆ. ಆದರೆ ನನ್ನ ಹೆತ್ತವರ ಬಗ್ಗೆ ಮಾತಾಡುವುದನ್ನು ಸಹಿಸಲು ತುಂಬಾ ಕಷ್ಟವಾಗುತ್ತಿದೆ. ಕಳೆದ ವಾರ ನನ್ನ ತಂಗಿ ಮತ್ತು ಅವಳ ಗಂಡ ನಮ್ಮ ಮನೆಗೆ ಬಂದಿದ್ದರು. ತಂಗಿಯ ಗಂಡನ ಹತ್ತಿರ ನಮ್ಮವರು ನನ್ನ ಮತ್ತು ಅಪ್ಪ, ಅಮ್ಮನ ಬಗ್ಗೆ ಏನೆಲ್ಲ ಲೇವಡಿ ಮಾಡಿ ಮಾತಾಡಿದ್ದಾರೆ. ಅದು ತಂಗಿಗೆ ಗೊತ್ತಾಗಿ ಅವಳು ಬೇಸರ ಪಟ್ಟುಕೊಂಡು ಅಪ್ಪ, ಅಮ್ಮನಿಗೂ ಹೇಳಿದ್ದಾಳೆ. ಅವರೀಗ ನನ್ನ ಮತ್ತು ನನ್ನ ಗಂಡನ ಬಗ್ಗೆ ಮುನಿಸಿಕೊಂಡಿದ್ದಾರೆ. ಹಾಗೆಲ್ಲ ಹೇಳಬಾರದೆಂದು ಅವರಿಗೆ ಕೆಲವೊಮ್ಮೆ ಗಮನಕ್ಕೆ ತಂದಿದ್ದರೂ ಅವರು ತನ್ನ ಚಾಳಿ ಬಿಟ್ಟಿಲ್ಲ. ಈಗ ಅಪ್ಪ, ಅಮ್ಮನ ಬೇಸರವನ್ನು ಹೇಗೆ ನಿವಾರಿಸಲಿ?

: ಬೆನ್ನ ಹಿಂದೆ ಹೇಳುವ ಈ ಕೆಟ್ಟ ಚಾಳಿ ಕೆಲವೊಮ್ಮೆ ಸಂಬಂಧವನ್ನೇ ಕೆಡಿಸುವಷ್ಟರಮಟ್ಟಿಗೆ ಹೋಗುತ್ತದೆ. ಅಂತವರ ಮೇಲೆ ಯಾರಿಗೂ ನಂಬಿಗೆ ಬರುವುದು ಕಷ್ಟ. ಯಾರ ಬಗ್ಗೆಯಾದರೂ ಇನ್ನೊಬ್ಬರ ಹತ್ತಿರ ಹಗುರವಾಗಿ ಮಾತಾಡಿದರೆ ಅದು ಹೇಗೋ ಅವರ ಕಿವಿಗೆ ಬಿದ್ದು ಅವರು ಆ ವ್ಯಕ್ತಿಯಿಂದಲೇ ದೂರಹೋಗುವ ಸಂಭವವೂ ಇರುತ್ತದೆ. ತಮ್ಮ ಆಪ್ತರು ಅಂತ ತಮ್ಮ ಪರ್ಸನಲ್ ವಿಷಯಗಳನ್ನು ಹೇಳಿಕೊಂಡರೆ ಅದನ್ನು ಜಗತ್ತಿಗೆಲ್ಲ ಹೇಳುತ್ತಾ ಹೋದರೆ ಮುಂದೆ ಆ ವ್ಯಕ್ತಿ ನಂಬಿಕೆಗೆ ದ್ರೋಹವೆಸಗಿದ ಇವರ ಮುಖವನ್ನೂ ನೋಡಲಿಕ್ಕಿಲ್ಲ. ಅಂತವರಿಗೆ ಸ್ನೇಹಿತರಾಗುವುದು ತುಂಬಾ ಕಡಿಮೆ. ಏನೋ ಬಾಯಿಚಪಲಕ್ಕೆ ಯಾರದ್ದಾದರೂ ಬಗ್ಗೆ ಲಘುವಾಗಿ ಮಾತಾಡಿದರೆ ಕೊನೆಗೆ ಅವರಿಗೇ ಅದು ತಿರುಗುಬಾಣವಾಗಬಹುದು. ನಿಮ್ಮ ಗಂಡನ ಈ ಚಟವನ್ನು ಹೇಗಾದರೂ ಮಾಡಿ ಬಿಡಿಸಲು ಪ್ರಯತ್ನಿಸಿ. ಅವರ ಆ ಗುಣದಿಂದ ಉಂಟಾಗುವ ಅನಾಹುತದ ಬಗ್ಗೆಯೂ ತಿಳಿಸಿಹೇಳಿ. ಕೊನೆಗೆ ಅವರೇ ದೋಷಿಗಳಾಗುವ ಸಾಧ್ಯತೆಯೂ ಇದೆ ಅಂತಲೂ, ಅಂತವರನ್ನು ಯಾರೂ ಇಷ್ಟಪಡುವುದಿಲ್ಲ ಅಂತಲೂ ತಿಳಿಸಿ. ಅವರಿಗೆ ನಿಮ್ಮ ಕುಟುಂಬದವರ ಅಥವಾ ನಿಮ್ಮ ಹೆತ್ತವರ ಬಗ್ಗೆ ಸಮಸ್ಯೆಯಿದ್ದರೆ ನಿಮಗೇ ಹೇಳುವಂತೆ ತಿಳಿಸಿ. ಈಗ ನಿಮ್ಮ ತಂದೆತಾಯಿಗೆ ಮೊದಲು `ಸಾರಿ’ ಕೇಳಿ. ಏನೋ ಮಾತಿನ ಭರದಲ್ಲಿ ಹಗುರವಾಗಿ ಹೇಳಿದ್ದನ್ನೇ ಮನಸ್ಸಿಗೆ ತೆಗೆದುಕೊಳ್ಳಬೇಡಿ ಅಂತ ವಿನಂತಿಸಿ.  ಕಿರಿಯರು ಅಂತ ಅವರು ಕ್ಷಮಿಸುತ್ತಾರೆ.