ಬಿಸಿಲ ಧಗೆಯಲ್ಲಿ ನಲುಗುತ್ತಿರುವ ಉಡುಪಿ, ಮಂಗಳೂರಿಗೆ ವಿದ್ಯುತ್ ಕಡಿತದ ಶಾಕ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇತ್ತ ಉಡುಪಿ-ಮಂಗಳೂರಿನ ಜನತೆ ಬೇಸಿಗೆಯ ಬಿಸಿಲ ಜ್ವಾಲೆಯನ್ನು ಸಹಿಸಲಾರದೆ ಏಸಿ/ಫ್ಯಾನ್ ಅರಸುತ್ತಿದ್ದರೆ ಅತ್ತ ಮೆಸ್ಕಾಂ ಹಲವು ಕೆವಿ ಫೀಡರುಗಳಲ್ಲಿ ದುರಸ್ತಿ ಕಾರ್ಯ ಹಮ್ಮಿಕೊಂಡು ವಿದ್ಯುತ್ ವ್ಯತ್ಯಯದ ವೇಳಾಪಟ್ಟಿ ತಯಾರಿಸುವ ಮೂಲಕ ಜನತೆಯ ಗಾಯದ ಮೇಲೆ ಬರೆ ಎಳೆದಿದೆ.

ವಿದ್ಯುತ್ ಕಡಿತಕ್ಕೆ ಕಾರಣ ಮುಂಗಾರು ಪೂರ್ವಸಿದ್ಧತೆ ಎಂದು ಮೆಸ್ಕಾಂ ಹೇಳಿದೆ. ಕಂಬಗಳನ್ನು ಸರಿಪಡಿಸುವಿಕೆ, ಸಮರ್ಪಕ ಸ್ಥಳಗಳಿಗೆ ಕಂಬಗಳ ವರ್ಗಾವಣೆ ಮತ್ತಿತರ ಕೆಲಸ ಕಾರ್ಯಗಳನ್ನು ಮೆಸ್ಕಾಂ ಹೊಂದಿದೆ. ಅದರಂತೆ ಮೆಸ್ಕಾಂ ಕೈಗೊಳ್ಳುವ ಕೆಲಸ ಕಾರ್ಯಗಳು ಈ ರೀತಿ ಇವೆ.

ಉಡುಪಿಯಲ್ಲಿ ಮೇ 20ರ ವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದ್ದು, ಮೇ 19ರಂದು ಸಂಜೆ 6 ಗಂಟೆವರೆಗೆ ಕೆಮ್ಮಾರ್ ಜಂಕ್ಷನ್ನಿನಿಂದ ಅಜೆಕಾರು, ಎಣ್ಣೆಹೊಳೆ, ಶಿರ್ಲಾಲು, ಬೈಲೂರು, ಹಿರ್ಗಾನ, ಪಳ್ಳಿ, ನಿಂಜೂರು, ಮೂಡ್ಲಿ, ತೆಲ್ಲಾರು, ಜಾರ್ಕಳ, ಬಂಡೀಮಠ, ಜಯಂತಿನಗರ, ಬಂಗ್ಲೆಗುಡ್ಡೆ, ಜೋಡುರಸ್ತೆ, ಕಜೆ, ಪತ್ತೊಂಜಿಕಟ್ಟೆ, ಟಿಎಂಸಿ ವಾಟರ್ ಸಪ್ಲೈ, ಬಜಗೋಳಿ, ಮೂಡಾರು, ಮಲ್ಲಾರು, ಕೆರ್ವಾಶೆ, ಮಾಲಾ, ಹೊಸ್ಮಾರು, ಈದು, ಕುರಿಯಾರು, ನೆಲ್ಲೂರು, ಮೀಯಾರು, ಜೋಡುಕಟ್ಟೆ, ರೆಂಜಾಳ, ಬೋರ್ಕಟ್ಟೆ, ಕರಿಯಕಲ್ಲು, ಕಾಳಿಕಾಂಬ ಮತ್ತು ಇತರ ನೆರೆಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮೇ 19ರಂದು ಮಣಿಪಾಲ ಜಂಕ್ಷನ್ನಿನಿಂದ ಕೆಎಂಎಫ್.ವರೆಗೆ ದುರಸ್ತಿ ಕೆಲಸ ನಡೆಯಲಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಜೆ 5.30 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಮೇ 20ರಂದು ಪಾಂಬೂರು, ಶಿರ್ವ ಮತ್ತು ನಂದಿಕೂರು ಜಂಕ್ಷನ್ ಫೀಡರಿನಲ್ಲಿ ದುರಸ್ತಿ ಕಾರ್ಯ ನಡೆಯಲಿದ್ದು, ಬೆಳಿಗ್ಗೆ 9.30 ರಿಂದ ಸಂಜೆ 5.30ರ ಗಂಟೆವರೆಗೆ ಈ ಫೀಡರಿನಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.