ವಿದ್ಯುತ್ ಕಡಿತಗೊಳಿಸಿದ್ದರಿಂದ ಗಂಗಾವಳಿ ನದಿತೀರದ ಗ್ರಾಮಗಳ ತೋಟಗಳಿಗೆ ಹಾನಿ

ಜಿಲ್ಲಾಡಳಿತದಿಂದಲೇ ನಷ್ಟ ಭರ್ತಿಗೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಕಾರವಾರ : “ಜಿಲ್ಲಾಡಳಿತ ವಿದ್ಯುತ್ ಕಡಿತಗೊಳಿಸಿದ್ದರಿಂದ ಗಂಗಾವಳಿ ನದಿತೀರದ ಗ್ರಾಮಗಳ ತೋಟಗಳಿಗೆ ನೀರಿಲ್ಲದೆ ಹಾನಿ ಉಂಟಾಗಿದ್ದು, ಈ ಹಾನಿಯನ್ನು ಜಿಲ್ಲಾಡಳಿತವೇ ಭರಿಸಬೇಕು” ಎಂದು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಮ ಗಾಂವಕರ್ ಒತ್ತಾಯಿಸಿದರು.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಗಂಗಾವಳಿ ನದಿ ತೀರದಲ್ಲಿರುವ ರೈತರು ಸುಮಾರು 3,000 ಎಕರೆ ಪ್ರದೇಶಗಳಲ್ಲಿ ಅಡಿಕೆ, ತೆಂಗು, ಕಾಳುಮೆಣಸು ಸೇರಿದಂತೆ ಇನ್ನಿತರ ಬೆಳೆಗಳನ್ನು ಪ್ರತಿವರ್ಷ ಬೆಳೆಯುತ್ತಾರೆ. ಆದರೆ ಈ ಪ್ರದೇಶದ ಬೆಳೆಗಳಿಗೆ ಗಂಗಾವಳಿ ನದಿ ನೀರು ಆಧಾರವಾಗಿದ್ದರಿಂದ ಕಳೆದ ಹಲವು ವರ್ಷದಿಂದ 3 ಫೇಸ್ ವಿದ್ಯುತ್ ಬಳಸಿಕೊಂಡು ಬೆಳೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಈ ಭಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಕಳೆದ ಒಂದು ತಿಂಗಳ ಹಿಂದೆ ಯಾವುದೇ ಪೂರ್ವಪರ ಮಾಹಿತಿ ನೀಡದೆ ಏಕಾಏಕಿ 3 ಫೇಸ್ ವಿದ್ಯುತ್ ಕಡಿತಗೊಳಿಸಿದ್ದರು. ಇದರಿಂದ ನದಿ ತೀರದ ಗ್ರಾಮಗಳಲ್ಲಿರುವ ತೋಟಗಳಿಗೆ ನೀರಿನ ಕೊರತೆ ಉಂಟಾಗಿ, ಬೆಳೆಗಳಿಗೆ ಹಾನಿಯಾಗಿದೆ” ಎಂದು ಆರೋಪಿಸಿದರು.

“ವಿದ್ಯುತ್ ಪೂರೈಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ಹಲವು ಭಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದರಿಂದ ಗಂಗಾವಳಿ ತಟದ ರೈತರು ನ್ಯಾಯಾಲಯದ ಮೋರೆ ಹೋಗಿದ್ದರು. ಅದರಂತೆ ಅರ್ಜಿಯನ್ನು ಪರಿಶೀಲನೆ ನಡೆಸಿದ ನ್ಯಾಯಾಲಯ ಕೂಡ ಜಿಲ್ಲಾಧಿಕಾರಿ ಆದೇಶಕ್ಕೆ 12 ವಾರಗಳ ತಡೆಯಾಜ್ಞೆ ನೀಡಿ, 3 ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಸೂಚಿಸಿತು. ಇದರಿಂದ ಕಳೆದ ಕೆಲವು ದಿನಗಳಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಈಗಾಗಲೆ ಬೆಳೆಗಳು ನೀರಿಲ್ಲದೆ ಕೆಂಪಾಗಿ, ಹಾನಿಯಾಗಿದೆ. ಈ ಭಾಗದ ರೈತರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ನೀರಿಲ್ಲದೆ ಬೆಳೆ ಹಾನಿಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಈ ಭಾಗದ ರೈತರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಂಬಂಧವೇ ಇಲ್ಲದವರಂತೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ಕೃಷಿ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕು. ಅಲ್ಲದೆ ಸಂಪೂರ್ಣ ನಷ್ಟವನ್ನು ಜಿಲ್ಲಾಡಳಿತವೇ ಭರಿಸಬೇಕು. ಇಲ್ಲವಾದಲ್ಲಿ ಗಂಗಾವಳಿ ನದಿ ತೀರದ ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.

ಎಪಿಎಂಸಿ ಸದಸ್ಯ ನಾರಾಯಣ ಹೆಗಡೆ, ವಕೀಲ ನಾಗರಾಜ ನಾಯಕ, ಯುವ ಒಕ್ಕೂಟದ ಸದಸ್ಯ ರಾಘವೇಂದ್ರ ಗಾಂವ್ಕರ, ನರಸಿಂಹ ಗಣಪತಿ ಹರಿಮನೆ ಉಪಸ್ಥಿತರಿದ್ದರು.