ನಗರ ರಸ್ತೆಗಳಲ್ಲಿ ಹೊಂಡಗಳದ್ದೇ ದರ್ಬಾರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜಧಾನಿ ಬೆಂಗಳೂರಿನ ಬಳಿಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಮಂಗಳೂರು. ಸಾಲದ್ದಕ್ಕೆ ಇದೀಗ ಸ್ಮಾರ್ಟ್ ಸಿಟಿ ಆಗುತ್ತಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಎಂದು ವೇದಿಕೆ ಏರಿ ಮೈಕ್ ಸಿಕ್ಕ ತಕ್ಷಣ ಬೊಬ್ಬಿರುವ ನಮ್ಮ ಜನಪ್ರತಿನಿಧಿಗಳಿಗೆ ತಾವು ದಿನನಿತ್ಯ ಸಂಚರಿಸುವ ರಸ್ತೆಗಳು ಹೊಂಡಗುಂಡಿಗಳಿಂದ ತುಂಬಿ ಹೋಗಿರುವುದು ಕಾಣುವುದೇ ಇಲ್ಲ.

ಪ್ರತಿದಿನ ಕನಿಷ್ಠ ನಾಲ್ಕೈದು ಮಂದಿ ಕೇಂದ್ರ, ರಾಜ್ಯ ಸರಕಾರದ ನಾಯಕರು ಮಂಗಳೂರಿನ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದಾರೆ. ಪ್ರತಿನಿತ್ಯ ಮಂಗಳೂರು ಮೇಯರ್ ಸಹಿತ, 60 ಕಾರ್ಪೊರೇಟರುಗಳು ಓಡಾಡಿಕೊಂಡಿದ್ದಾರೆ. ಆದರೆ ಇಲ್ಲಿನ ರಸ್ತೆಗಳನ್ನು ಸುಸ್ಥಿತಿಗೆ ತರಬೇಕೆಂಬ ಕನಿಷ್ಠ ಪ್ರಜ್ಞೆಯೂ ಇವರಲ್ಲಿಲ್ಲ.

ಮಂಗಳೂರನ್ನು ಪ್ರವೇಶಿಸುವ ಹೆಬ್ಬಾಗಿಲು ಪಂಪ್ವೆಲ್ಲಿನಿಂದ ಹಿಡಿದು ಅತ್ತ ಹೊರತೆರಳುವ ಕೊಟ್ಟಾರ, ಕೂಳೂರುತನಕದ ಪಾಲಿಕೆ ವ್ಯಾಪ್ತಿಯೊಳಗಿನ ರಸ್ತೆಯನ್ನೊಮ್ಮೆ ಕಣ್ಣಾಡಿಸಿ ನೋಡಿ. ಎಷ್ಟೊಂದು ಹೊಂಡಗುಂಡಿಗಳಿವೆ. ಪಂಪ್ವೆಲ್, ಕಂಕನಾಡಿ, ಕಂಕನಾಡಿ ಬೈಪಾಸ್, ಬೆಂದೂರುವೆಲ್, ಕದ್ರಿ ಶಿವಭಾಗ್ ರಸ್ತೆ, ನಂತೂರು ಸರ್ಕಲ್ ರಸ್ತೆ, ಬಿಜೈ, ಶಕ್ತಿನಗರ ಹೀಗೆ ಎಲ್ಲಾ ಕಡೆಯ ರಸ್ತೆಗಳ ದುರವಸ್ಥೆಯನ್ನು ಕೇಳುವವರಿಲ್ಲ.

ಕೆಲ ದಿನಗಳ ಹಿಂದೆಯಷ್ಟೇ ರಸ್ತೆ ದುರಸ್ತಿ ಪಡಿಸಿ ಎಂದು ಬೆಂದೂರುವೆಲ್ ಬಳಿ ರಿಕ್ಷಾ ಚಾಲಕರು ಸಾಮಾಜಿಕ ಕಾರ್ಯಕರ್ತ ಎಸ್ ಪಿ ಚೆಂಗಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರೆ, ಕದ್ರಿಯಲ್ಲಿ ಜೆರಾಲ್ಡ್ ಟವರ್ ಅವರು ಶವದ ಅಣಕು ಪ್ರದರ್ಶನ ಮಾಡಿದ್ದರು.

ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ಅಂದು ಮಂಗಳೂರು ನಗರ ಪಾಲಿಕೆಯ ರಸ್ತೆಗಳ ಹಾಗೂ ಇತರ ಕಾಮಗಾರಿಗಳಿಗಾಗಿ ನೂರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರು. ಅಂದು ಬಿಡುಗಡೆಯಾದ ಹಣದಿಂದ ನಗರದ ಪ್ರಮುಖ ರಸ್ತೆಗಳು ಕಾಂಕ್ರಿಟೀಕರಣವಾಗಿದ್ದವು. ಕನಿಷ್ಠ ಅಕ್ಕಪಕ್ಕ ಚರಂಡಿ ಇಲ್ಲದಿದ್ದರೂ ರಸ್ತೆಗಳಂತೂ ಸುಸ್ಥಿತಿಗೆ ಬಂದಿದ್ದವು. ಬಳಿಕ ಕಾಂಗ್ರೆಸ್ ಸರಕಾರ ಬಂದಾಗ ದುಡ್ಡೂ ಇಲ್ಲ, ರಸ್ತೆಗಳೂ ದುರಸ್ತಿ ಕಂಡಿಲ್ಲ. ಎಲ್ಲಾ ಭಾಗ್ಯಗಳನ್ನು ನೀಡುವ ಸರಕಾರ ರಸ್ತೆ ವಿಚಾರದಲ್ಲಿ ಮಾತ್ರ ಮಂಗಳೂರಿಗರನ್ನು ದೌರ್ಭಾಗ್ಯಕ್ಕೆ ಒಳಪಡಿಸಿದೆ.

ಮಳೆಗೆ ಕಿತ್ತುಹೋದ ಡಾಮರುಗಳ ಜೊತೆಗೆ ಹೊಂಡಗಳೂ ಇದೀಗ ನಿರ್ಮಾಣಗೊಂಡಿದ್ದು, ದ್ವಿಚಕ್ರ ವಾಹನಗಳು ಮುಳುಗುವಷ್ಟರ ಮಟ್ಟಿಗೆ ಇವುಗಳು ಕೊರೆಯಲ್ಪಟ್ಟಿದೆ. ಬೆಂದೂರುವೆಲ್, ಪಂಪ್ವೆಲ್ ಬೈಪಾಸ್ ರಸ್ತೆಯ ಅವಸ್ಥೆಯನ್ನಂತು ಕೇಳುವಂತೆಯೂ ಇಲ್ಲ. ಸಾಲದ್ದಕ್ಕೆ ಕಾಂಕ್ರಿಟ್ ರಸ್ತೆಗಳನ್ನೂ ಒಳಚರಂಡಿ, ನೀರಿನ ಪೈಪ್ ಕಾರಣಕ್ಕೆ ಕೊರೆಯಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಡಾಮರು ಹಾಕಿದ ವಾರದೊಳಗೆ ರಸ್ತೆ ಅಗೆಯಲಾಗುತ್ತಿದೆ !

ಕೇಂದ್ರ ವ್ಯಾಪ್ತಿಗೆ ಬರುವ ಹೆದ್ದಾರಿಗಳ ರಸ್ತೆಯೂ ಇದಕ್ಕಿಂತ ಹೊರತಾಗಿಲ್ಲ. ಕೇವಲ ಟೋಲ್ ಪಡೆದುಕೊಳ್ಳಲಾಗುತ್ತಿದೆ ವಿನಾ ಎಲ್ಲೂ ಕೂಡಾ ಸರಿಯಾದ ಕಾಮಗಾರಿ ನಡೆದಿಲ್ಲ. ಇದು ಜನರ ದೌರ್ಭಾಗ್ಯ.