ನೋಟು ಅಮಾನ್ಯ ನಂತರ ರಂಗೋಲಿಯಡಿ ನುಸುಳಿದ ಕಾಳಧನಿಕರು

ಹೊಸ ನೋಟಿನೊಂದಿಗೆ ಕರಗಿದ ಕಪ್ಪುಹಣ

ಯಾವುದೇ ಹೊಸ ಕಾನೂನು ಬಂದರೂ ಆ ಕಾನೂನಿನ ಲೋಪದೋಷ ಪತ್ತೆ ಮಾಡಿ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುವ ಕಲೆ ಭಾರತೀಯರಿಗೆ ಹಿಂದಿನಿಂದಲೇ ಕರಗತ. ಈಗ ದೇಶದಲ್ಲಿ ನಡೆಯುತ್ತಿರುವ ನೋಟು ಅಮೌಲ್ಯ ಪ್ರಕ್ರಿಯಲ್ಲಿ ಕೂಡ ಕಾಳಧನಿಕರು ರಂಗೋಲಿಯಡಿ ನುಸುಳಿ ಹೊಸ ನೋಟುಗಳ ಕಂತೆ ರಾಶಿ ಹಾಕತೊಡಗಿದ್ದಾರೆ.

ಅತ್ತ ರಾಜಧಾನಿಯಲ್ಲಿ ಕೇಂದ್ರ ಹಣಕಾಸು ಸಚಿವ ಕಪ್ಪು ಹಣ ನಿಯಂತ್ರಣದ ಹೊಸ ಕಾನೂನು ತಿದ್ದುಪಡಿಗಳ ಘೋಷಣೆ ಮಾಡುತ್ತಿದ್ದಂತೆ ಇತ್ತ ಬೆಂಗಳೂರಿನಲ್ಲಿ ನಾಲ್ಕೂವರೆ ಕೋಟಿ ರೂಪಾಯಿ ಹೊಸ ನೋಟುಗಳ ಕಂತೆಯನ್ನು ಕಾಳಧನಿಕರು ರಾಶಿಹಾಕಿರುವ ವಿಚಾರ ಕಾಕತಾಳೀಯ ಇರಬಹುದು.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರಕಾರದ ಹಣಕಾಸು ಸಚಿವರು ಕಪ್ಪು ಹಣ ಸ್ವಂಯಂಘೋಷಣೆ ಮಾಡದಿದ್ದರೆ ಉಗ್ರ ಕ್ರಮಕೈಗೊಳ್ಳುವುದಾಗಿ ಭಾಷಣ ಮಾಡುತ್ತಿದ್ದಂತೆ, ಅತ್ತ ಚುನಾವಣೆ ನಡೆಯುತ್ತಿದ್ದ ಬಿಹಾರ ರಾಜ್ಯದಲ್ಲಿ ಒಂದು ಲಕ್ಷ ಅಮೆರಿಕನ್ ಡಾಲರ್ ನೋಟುಗಳು ಪತ್ತೆಯಾಗಿದ್ದವು. ಕೇಂದ್ರ ಹಣಕಾಸು ಸಚಿವರು ಹೆಚ್ಚು ಒತ್ತು ಕೊಟ್ಟು ಭಾಷಣ ಮಾಡುತ್ತಿದ್ದು ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವ ವಿಚಾರದಲ್ಲಿ.

ಅಂದು ಕೇಂದ್ರ ವಿತ್ತ ಸಚಿವರಿಗೆ ಈ ವಿದ್ಯಮಾನ ಇರಿಸು-ಮುರಿ ಉಂಟು ಮಾಡಿತೋ ಗೊತ್ತಿಲ್ಲ. ಈಗಂತೂ ದಿನ ಕಳೆದಂತೆ ನರೇಂದ್ರ ಮೋದಿ ಸರಕಾರದ ಕಪ್ಪು ಹಣದ ಕಟ್ಟುಗಳು ಬಣ್ಣ ಕಳಕೊಂಡು ಬೆತ್ತಲಾಗತೊಡಗಿವೆ.

ಪ್ರಧಾನಿ ಚಾಲನೆ ನೀಡಿದ ಕಪ್ಪು ಹಣ ವಿರುದ್ಧ ಹೋರಾಟದಲ್ಲಿ ದಿನಗಳೆಂದಂತೆ ಜನಸಾಮಾನ್ಯರಿಗೆ, ಸಣ್ಣ ವರ್ತಕರಿಗೆ, ಕಾರ್ಮಿಕರಿಗೆ ದೈನಂದಿನ ಹಿಂಸೆಯಾಗಿ ಪರಿಣಮಿಸಿದೆಯೇ ಹೊರತು ದೇಶದಲ್ಲಿ ಅಡಗಿರುವ ಕಪ್ಪು ಹಣವನ್ನು ಪತ್ತೆ ಮಾಡುವಲ್ಲಿ ವಿಫಲವಾಗುತ್ತಿರುವುದು ಕಂಡುಬಂದಿದೆ.

ದೇಶದಲ್ಲಿರುವ ಒಂದು ಲಕ್ಷ ಬ್ಯಾಂಕು ಶಾಖಗಳಲ್ಲಿ ಗ್ರಾಹಕರಿಗೆ ಹಣ ದೊರೆಯುತ್ತಿಲ್ಲ. ದೇಶದಲ್ಲಿರುವ ಎರಡು ಲಕ್ಷ ಎಟಿಎಂಗಳು ಬಹುತೇಕ ಕಳೆದ ನವೆಂಬರ್ 9ರಿಂದ ಬಂದ್ ಆಗಿದ್ದರೆ, ಕೆಲಸ ಮಾಡುವ ಕೆಲವೇ ಕೆಲವು ಎಟಿಎಂಗಳಲ್ಲಿ ಎರಡು ಸಾವಿರದ ಒಂದು ನೋಟು ಮಾತ್ರ ಒಬ್ಬ ಗ್ರಾಹಕನಿಗೆ ಒಂದು ದಿನ ದೊರೆಯುತ್ತದೆ. ಪರಿಸ್ಥಿತಿ ಹೀಗಿರುವಾಗ ಹೊಸ ಎರಡು ಸಾವಿರ ರೂ ಮುಖ ಬೆಲೆಯ ನೋಟು ಚಲಾವಣೆಗೆ ಬಂದ 22 ದಿವಸದಲ್ಲಿ ಅಧಿಕಾರಿಯೊಬ್ಬ 4.75 ರೂ ಮೌಲ್ಯ ಹೊಸ ನೋಟುಗಳನ್ನು ಸಂಗ್ರಹಿಸಲು ಹೇಗೆ ಸಾಧ್ಯವಾಯಿತು ಎಂಬುದು ಈಗ ಜನಸಾಮಾನ್ಯರ ಪ್ರಶ್ನೆ. ಹಣವೊಂದಿದ್ದರೆ ಈ ದೇಶದಲ್ಲಿ ಏನೂ ಕೂಡ ಮಾಡಬಹುದು ಎಂಬ ವಾತಾವರಣ ಇರುವಾಗ ಕ್ಯಾಶ್ ಲೆಸ್ ವಹಿವಾಟು ಹೇಗೆ ಆರಂಭವಾಗಲು ಸಾಧ್ಯ ?

ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಹೇಳಿರುವ ಕೇಂದ್ರ ಸರಕಾರಕ್ಕೆ ಯಾವ ಕಾಳಧನಿಕನು ಸೊಪ್ಪು ಹಾಕಿಲ್ಲ. ವಿದೇಶದಲ್ಲಿರುವ 35 ಸಾವಿರ ಕೋಟಿ ರೂಪಾಯಿ ಸದ್ಯಕ್ಕಂತೂ ನಮ್ಮ ದೇಶಕ್ಕೆ ಬರುವುದು ಕಾಣುತ್ತಿಲ್ಲ. ಇನ್ನು, ನಮ್ಮ ದೇಶದಲ್ಲಿರುವ ಕಪ್ಪುಹಣ ಹೊಂದಿರುವವರು ಕಿಂಚಿತ್ತೂ ಚಿಂತಿಸಿಲ್ಲ. ಏಕೆಂದರೆ, ನಮ್ಮ ದೇಶದಲ್ಲಿ ಎಲ್ಲಕ್ಕೂ ಒಂದು ಅಡ್ಡ ದಾರಿ ಇದ್ದೇ ಇದೆ. ಬಿಹಾರದ ವಿಧಾನಸಬಾ ಚುನಾವಣೆಗೆ ವಿದೇಶ ಡಾಲರಿನಲ್ಲಿ ಹವಾಲಾ ಮೂಲಕ ಬಂದಿರುವಾಗ ದೇಶದೊಳಗೆ ಹವಾಲ ವಿನಿಮಯ ಅಚ್ಚರಿ ಹುಟ್ಟಿಸುವುದಿಲ್ಲ.

ಸರಕಾರ ನಡೆಸುವ ರಾಜಕೀಯ ಪಕ್ಷಗಳ ಮುಖಂಡರೇ ತಮ್ಮ ಪಕ್ಷಕ್ಕೆ ಬರುವ ದೇಣಿಗೆಯ ಬಹುತೇಕ ಪಾಲು ದೊಡ್ಡ ಮೊತ್ತವನ್ನು ಸಣ್ಣ ಮೊತ್ತವಾಗಿ ವಿಂಗಡಿಸಿ ಖಾತೆ ಹಾಕಿದರೆ ಚುನಾವಣಾ ಆಯೋಗಕ್ಕೆ ಲೆಕ್ಕ ತೋರಿಸಬೇಕಾಗಿಲ್ಲ. ಒಬ್ಬ ಉದ್ಯಮಿ ದೊಡ್ಡ ಮೊತ್ತದ ದೇಣಿಗೆ ನೀಡದಾಗ ಅದನ್ನು ಅತ್ಯಂತ ಸುಲಭವಾಗಿ ಬಿಳಿ ಮಾಡಲು ಸಾಧ್ಯವಾಗುತ್ತದೆ.

ಕಳೆದ ವರ್ಷ ಕೇಂದ್ರ ಸರಕಾರ ಕಪ್ಪು ಹಣದ ಸ್ವಯಂಘೋಷಣೆ ಯೋಜನೆ ಜಾರಿ ಮಾಡಿದಾಗ ಅದು ಬಹುತೇಕ ವೈಫಲ್ಯ ಕಂಡಿತು. ಏಕೆಂದರೆ, ಕಳೆದ ವರ್ಷ ಕೇವಲ 3,775 ಕೋಟಿ ರೂಪಾಯಿ ಮಾತ್ರ ಘೋಷಣೆ ಆಗಿತ್ತು. ಈ ವರ್ಷ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಜಾರಿ ಮಾಡಿದ ಐಡಿಎಸ್ ಯೋಜನೆಯಲ್ಲಿ ಕಾಳಧನಿಕರು 65 ಸಾವಿರ ಕೋಟಿ ಆಧಾಯ ಘೋಷಣೆ ಆಗಿತ್ತು. ಈ ಸರಕಾರ ಡಿಸೆಂಬರ್ ತಿಂಗಳಲ್ಲಿ ಮತ್ತೆ ಆದಾಯ ಘೋಷಣೆ ಮಾಡಲು ಅವಕಾಶ ನೀಡಿದ್ದು, ಶೇಕಡ 50ರಷ್ಟು ತೆರಿಗೆ ವಿಧಿಸುವುದಾಗಿ ಹೇಳಿದೆ.

ಈ ಮಧ್ಯೆ, ಕಾಳಧನಿಕರು ವಿವಿಧ ಕಳ್ಳ ಹಾದಿಗಳ ಮೂಲಕ ತಮ್ಮ ತೆರಿಗೆ ಪಾವತಿಸದ ಹಣವನ್ನು ಹೊಸ ನೋಟಿನೊಂದಿಗೆ ವಿನಿಮಯ ಮಾಡಿಕೊಂಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಮೂಲಕ ಮಾತ್ರವಲ್ಲದೆ, ವಿದ್ಯುತ್ ಸರಬರಾಜು ಕಂಪೆನಿ, ಟೆಲಿಕಾಂ ಕಂಪೆನಿ ಇತ್ಯಾದಿ ದೈನಂದಿನ ಬಿಲ್ ಪಡೆಯುವ ಸಂಸ್ಥೆಗಳ ಮೂಲಕ ಕೂಡ ಹಳೇ ನೋಟನ್ನು ಕಳ್ಳ ಹಾದಿಯಲ್ಲಿ ವಿನಿಮಯ ಮಾಡಲಾಗಿದೆ.

ರಾಜಕೀಯ ಪ್ರಭಾವ ಮತ್ತು ಹಣದ ಪ್ರಭಾವ ಹೊಂದಿರುವ ಉದ್ಯಮಿಗಳು ಇಂತಹ ಸಂಸ್ಥೆಗಳಲ್ಲಿ ತುಂಬುವ ಹೊಸ ಎರಡು ಸಾವಿರ ಮೌಲ್ಯದ ನೋಟು ಮತ್ತು ಹಳೇ ನೂರರ ನೋಟುಗಳ ಮೂಲಕ ತಮ್ಮ ಹಳೇ ನೋಟುಗಳನ್ನು ಬದಲಾಯಿಸಿಕೊಂಡಿರುವುದು ಕೇಂದ್ರ ಸರಕಾರಕ್ಕೆ ಗೊತ್ತಾಗಿಲ್ಲವೇ ?

  • ಪ್ರಮೋದ ಪಿ, ಮಂಗಳೂರು