ಮಡಿಕೇರಿ ನಗರಸಭೆ ಟೀವಿ ಪರದೆಯಲ್ಲಿ ಬ್ಲೂ ಫಿಲ್ಮ್ !

ಸಾಂದರ್ಭಿಕ ಚಿತ್ರ

ಮಡಿಕೇರಿ : ಇಲ್ಲಿನ ನಗರಸಭೆ ಕಚೇರಿಯಲ್ಲಿನ ಟೀವಿ ಪರದೆಯಲ್ಲಿ ಇತ್ತೀಚೆಗೆ ಎರಡು ನಿಮಿಷಗಳ ಅಶ್ಲೀಲ ವೀಡಿಯೋವೊಂದು ಪ್ರಸಾರಗೊಂಡ ಘಟನೆ ಸಾಕಷ್ಟು ಸಂಚಲನ ಮೂಡಿಸಿದೆಯಲ್ಲದೆ ವಿವಾದಕ್ಕೂ ಕಾರಣವಾಗಿದೆ.

ತಾಲೂಕಿನಲ್ಲಿ ಕೈಗೆತ್ತಿಕೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಚಿತ್ರಣವನ್ನು ಟೀವಿ ಪರದೆಯಲ್ಲಿ ಕಳೆದ ವಾರ ಅಧಿಕಾರಿಗಳು ತೋರಿಸುತ್ತಿದ್ದಾಗ ನಡುವೆಯೇ ಈ ಅಶ್ಲೀಲ ವೀಡಿಯೋ ಎರಡು ನಿಮಿಷಗಳ ಕಾಲ ಕಾಣಿಸಿತೆನ್ನಲಾಗಿದೆ. ಆಡಳಿತ ಕಾಂಗ್ರೆಸ್ ಪಕ್ಷ ಈ ವಿಚಾರವಾಗಿ ವಿಪಕ್ಷ ಜೆಡಿ(ಎಸ್) ಹಾಗೂ ಬಿಜೆಪಿಯಿಂದ ತೀವ್ರ ತರಾಟೆಗೊಳಗಾಗಿದೆ.

ತನ್ನನ್ನು ಸಮರ್ಥಿಸಿಕೊಂಡ ನಗರಸಭೆ ಆಡಳಿತ ಅಶ್ಲೀಲವೆಂದು ಹೇಳಲಾದ ವೀಡಿಯೋವನ್ನು ಮತ್ತೆ ಪ್ರದರ್ಶಿಸಿ ಅದರಲ್ಲಿ ಆಕ್ಷೇಪಾರ್ಹ ದೃಶ್ಯಗಳೇನು ಇಲ್ಲ ಎಂದು ಹೇಳಿದೆ.

ಜುಲೈ 5ರಂದು ಅಪರಾಹ್ನ ಸುಮಾರು 3 ಗಂಟೆ ಹೊತ್ತಿಗೆ ಈ ಅಶ್ಲೀಲ ವೀಡಿಯೋ ನಗರಸಭೆ ಟೀವಿ ಪರದೆಯಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಆಘಾತವುಂಟಾಗಿತ್ತು. ನಗರಸಭೆಯ ಮಹಿಳಾ ಉದ್ಯೋಗಿಯೊಬ್ಬರು ಇದನ್ನು  ಗಮನಿಸಿ ಕೂಡಲೇ ಸಂಬಂಧಿತರಿಗೆ ಮಾಹಿತಿ ನೀಡಿದ ನಂತರ ವೀಡಿಯೋ ಪ್ರಸಾರ ನಿಲ್ಲಿಸಲಾಗಿತ್ತು.

ಬುಧವಾರ ಈ ವಿಚಾರವಾಗಿ ವಿಪಕ್ಷಗಳು ಸೈಬರ್ ಪೊಲೀಸರಿಗೆ  ಹಾಗೂ ಜಿಲ್ಲಾ ಯೋಜನಾಧಿಕಾರಿ ಮೊಹಮ್ಮದ್ ಮುನೀರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಮುನೀರ್ ಅವರು ಈ ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿ’ಸೋಜ ಹೇಳಿದ್ದಾರೆ.