ಅಗ್ಗದ ಜನಪ್ರಿಯತೆ, ಹಿಟ್ಲರನಂತಹ `ಸಂರಕ್ಷಕರ’ ಬಗ್ಗೆ ಪೋಪ್ ಎಚ್ಚರಿಕೆ

ಮ್ಯಾಡ್ರಿಡ್ : ಅಗ್ಗದ ಜನಪ್ರಿಯತೆಯ ವಿರುದ್ಧ ಎಚ್ಚರಿಕೆ ನೀಡಿರುವ ಪೋಪ್ ಫ್ರಾನ್ಸಿಸ್ ಇದು ಹಿಟ್ಲಲರನಂತಹ `ಸಂರಕ್ಷಕರ’ ಆಯ್ಕೆಗೆ ಅವಕಾಶ ನೀಡಬಹುದೆಂದು  ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸ್ಪೇನಿನ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೋಪ್,   ಟ್ರಂಪ್ ಅವರ ಕಾರ್ಯವೈಖರಿ ಪರಾಮರ್ಶಿಸಲು ಇನ್ನೂ ಸಮಯ ಕೂಡಿ ಬಂದಿಲ್ಲ ಎಂದರು. “ನೋಡೋಣ. ಅವರೇನು ಮಾಡುತ್ತಾರೆಂದು ನೋಡಿ ನಂತರ ಪರಿಶೀಲಿಸೋಣ” ಎಂದು ಪೋಪ್ ಹೇಳಿದರು.

ವಿದೇಶಿಯರನ್ನು ಗೋಡೆಗಳು ಹಾಗೂ ಮುಳ್ಳುತಂತಿಗಳಿಂದ ಹೊರಗಿಡುವ ಯೋಚನೆಯನ್ನು ಖಂಡಿಸಿದ ಪೋಪ್, “ಇದು ಹೊಸ ಬಿಕ್ಕಟ್ಟು ಮತ್ತು ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂದು.

“ಅಗ್ಗದ ಜನಪ್ರಿಯತೆಯ ವಿಚಾರ ಬಂದಾಗ ಒಂದು ಉತ್ತಮ ಉದಾಹರಣೆ 1933ರಲ್ಲಿ ಜರ್ಮನಿಯಾಗಿತ್ತು” ಎಂದ ಪೋಪ್ “ಜರ್ಮನಿ ಆ ಸಮಯದಲ್ಲಿ ತನ್ನ ಅಸ್ತಿತ್ವ ಹಾಗೂ ಐಡೆಂಟಿಟಿಗಾಗಿ ಪರದಾಡುತಿದ್ದಾಗ `ನಾನು ಅದನ್ನು ಮಾಡಬಲ್ಲೆ’ ಎಂದು ಹಿಟ್ಲರ್ ಮುಂದೆ ಬಂದಿದ್ದ” ಎಂದು ನೆನಪಿಸಿಕೊಂಡರು.

“ಹಿಟ್ಲರ್ ಯಾರಿಂದಲೂ ಅಧಿಕಾರ ಕಸಿದುಕೊಂಡು ಸರಕಾರಕ್ಕೆ ಬರಲಿಲ್ಲ. ಆತ ಜನರಿಂದಲೇ ಅಧಿಕಾರ ಪಡೆದು ನಂತರ ಜನರನ್ನೇ ನಾಶಗೊಳಿಸಿದನು” ಎಂದು ಪೋಪ್ ಹೇಳಿದರು.