ಯಡ್ಯೂರಪ್ಪ ಸಹಿತ ಬಿಜೆಪಿ ಮುಖಂಡರ ವಿರುದ್ಧ ಕಾರ್ಯಕರ್ತರ ಅಸಮಾಧಾನ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಪುತ್ತೂರು ವಿಧಾನಸಭಾ ವ್ಯಾಪ್ತಿಯ ಗಡಿಭಾಗದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಸ್ವಾಗತಿಸಲು ನಿಂತಿದ್ದ ಇಳಂತಿಲ, ತಣ್ಣೀರುಪಂಥ ಗ್ರಾ ಪಂ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಕೆಲ ಕಾರಣಗಳಿಂದಾಗಿ ತೀವ್ರ ನಿರಾಶೆಗೊಳಗಾಗುವಂತಾಗಿದೆ.

ಪುತ್ತೂರಿನಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶ ಪಡೆಯುವ ಸ್ಥಳವಾದ ಉಪ್ಪಿನಂಗಡಿ ಬಳಿಯ ನೇತ್ರಾವತಿ ಸೇತುವೆಯ ಆ ಬದಿ ಕಾರ್ಯಕರ್ತರು ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದರು. 5 ಗಂಟೆಗೆ ಪರಿವರ್ತನಾ ಯಾತ್ರೆ ಬರುವುದೆಂದು ಅದಕ್ಕಿಂತ ಸುಮಾರು ಮುಕ್ಕಾಲು ಗಂಟೆ ಮೊದಲೇ ಅಲ್ಲಿ ನೆರೆದಿದ್ದರು. ಪೂರ್ಣಕುಂಭ ಸ್ವಾಗತದೊಂದಿಗೆ ಪುಷ್ಪಾರ್ಚನೆ ಮಾಡಲು ಅಣಿಯಾಗಿದ್ದರು. ಚೆಂಡೆ ಬಳಗವೂ ಅಲ್ಲಿತ್ತು. ನಿರೀಕ್ಷೆಯಂತೆ

4:50ಕ್ಕೆ ಪರಿವರ್ತನಾ ಯಾತ್ರೆ ಆಗಮಿಸಿತ್ತು. ಆದರೆ ಅದರಲ್ಲಿ ನಾಯಕರ್ಯಾರು ಇರಲಿಲ್ಲ. ಅದಕ್ಕೆ ಪುಷ್ಪಾರ್ಚನೆಯ ಸ್ವಾಗತ ಕೋರುತ್ತಿದ್ದಂತೆಯೇ ರಥ ಅಲ್ಲಿಂದ ಬೆಳ್ತಂಗಡಿ ಕಡೆಗೆ ಪಯಣ ಬೆಳೆಸಿತ್ತು. ಬಳಿಕ ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಗಣೇಶ್ ಕಾರ್ಣಿಕ್ ಸೇರಿದಂತೆ ಬಿಜೆಪಿ ನಾಯಕರುಗಳು ಒಬ್ಬೊಬ್ಬರಾಗೇ ರಥದಿಂದ ಬಹಳಷ್ಟು ಅಂತರ ಕಾಯ್ದುಕೊಂಡು ತಮ್ಮಷ್ಟಕ್ಕೇ ಬೆಳ್ತಂಗಡಿ ಕಡೆಗೆ ಪಯಣ ಬೆಳೆಸಿದರು. ಇವರೆಲ್ಲರೂ ಪಯಣದಲ್ಲೇ ಇವರತ್ತ ಕೈ ಬೀಸಿದರಲ್ಲದೆ, ಯಾರೂ ಕಾರಿನಿಂದಿಳಿದು ಬರಲಿಲ್ಲ. ಇದು ಅಲ್ಲಿದ್ದ ಕಾರ್ಯಕರ್ತರಲ್ಲಿ ನಿರಾಶೆಗೆ ಕಾರಣವಾಯಿತ್ತಲ್ಲದೆ, ಇಲ್ಲಿ ಕಾದರೆ ಬೆಳ್ತಂಗಡಿಯ ಕಾರ್ಯಕ್ರಮವೂ ಇಲ್ಲ. ಇದೂ ಇಲ್ಲದಂತಹ ಪರಿಸ್ಥಿತಿ ಮುಂದಾಗುತ್ತದೆಯೆಂದು ಹಲವರು ಅಲ್ಲಿಂದ ನಿರ್ಗಮಿಸಿದರು.

ಹಾರ, ತುರಾಯಿ ಕಾರ್ಯಕರ್ತರ ಕೈಯಲ್ಲೇ !ರಾತ್ರಿ ಸುಮಾರು 6:35ರ ವೇಳೆಗೆ ಯಡ್ಯೂರಪ್ಪ ಅವರ ಕಾರು ಬರುತ್ತಿದ್ದಂತೆಯೇ ಚೆಂಡೆವಾಲಗ, ಪೂರ್ಣಕುಂಭ ಸ್ವಾಗತದೊಂದಿಗೆ ಅವರನ್ನು ಎದುರುಗೊಳ್ಳಲು ಮುಂದಾದರು. ಈ ಸಂದರ್ಭ ಯಡ್ಯೂರಪ್ಪ ಅವರು ಕಾರಿನ ಬಾಗಿಲು ತೆಗೆದರಾದರೂ, ಕೆಳಗಿಳಿಯದೇ ನಿಂತುಕೊಂಡೇ ಮಲ್ಲಿಗೆ ಮಾಲೆಯೊಂದನ್ನು ಕೊರಳಿಗೆ ಹಾಕಿಸಿಕೊಂಡರು. ಬಳಿಕ ಕಾರ್ಯಕರ್ತರು ಅವರಿಗೆ ಮೈಸೂರು ಪೇಟ ತೊಡಿಸಲು ಎರಡೆರಡು ಬಾರಿ ಮುಂದಾದಾಗಲೂ ಕೈಯಿಂದ ಅದನ್ನು ಆ ಕಡೆ ದೂಡಿದ್ದಲ್ಲದೆ, ಅದನ್ನು ತಲೆಗೆ ಇಡಲು ನಿರಾಕರಿಸಿದರು. ಇದರಿಂದಾಗಿ ಹಾರ, ಸೇರಿದಂತೆ ಸನ್ಮಾನಕ್ಕೆ ತಂದ ಸಾಮಗ್ರಿಗಳು ಕಾರ್ಯಕರ್ತರ ಕೈಯಲ್ಲೇ ಉಳಿಯುವಂತಾಯಿತು. ನಾಯಕರುಗಳ ಈ ನಡೆ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ನಿರಾಶೆಯನ್ನೂ ಮೂಡಿಸಿತ್ತಲ್ಲದೇ, ಕೆಲವರು ಅಲ್ಲಿಯೇ ಬಹಿರಂಗವಾಗಿಯೇ ಅಸಮಧಾನ ಹೊರಹಾಕುತ್ತಿದ್ದುದ್ದು ಕಂಡು ಬಂತು.