`ಪೂಜಾರಿ ಹೇಳಿಕೆ ಗಂಭೀರ ಪರಿಗಣಿಸುವ ಅಗತ್ಯವಿಲ್ಲ’

ಛಾಟಿಯೇಟು ಬೀಸಿದ ಸಿದ್ದರಾಮಯ್ಯ

  ಮೈಸೂರು : ಸದಾ ರಾಜ್ಯ ಸರಕಾರದ ವಿರುದ್ಧ ಒಂದಲ್ಲ ಒಂದು ರೀತಿಯಲ್ಲಿ ಅಪಸ್ವರ ಎತ್ತುತ್ತಲೇ ಇರುವ ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಛಾಟಿಯೇಟು ಬೀಸಿದ್ದಾರೆ. ಪೂಜಾರಿಯ ಮಾತುಗಳಿಗೆ ಪಕ್ಷ  ಯಾವುದೇ ಬೆಲೆ ನೀಡದು ಎಂಬುದನ್ನು ಮನದಟ್ಟ ಮಾಡಲೆಂದೇ ಸಿದ್ದರಾಮಯ್ಯರಿಂದ ಗುರುವಾರ ಹೇಳಿಕೆಯೊಂದು ಬಂದಿದೆ. “ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುವುದು ಎಂದು ಹೇಳಿರುವ ಪೂಜಾರಿಯ ಮಾತುಗಳನ್ನು ಗಂಭೀರವಾಗಿ  ಪರಿಗಣಿಸುವ ಅಗತ್ಯವಿಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ಪೂಜಾರಿಯ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೇನೂ ತೊಂದರೆಯಾಗದು. ಅವರಿಗೆ ನಂಜನಗೂಡು ಕ್ಷೇತ್ರದ ಮತದಾರರ ಒಲವು ಯಾರತ್ತ ಇದೆ ಎಂದು ತಿಳಿದಿಲ್ಲ. ಅವರ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ” ಎಂದು ಮೈಸೂರು ವಿಮಾಣ ನಿಲ್ದಾಣದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೇಳಿದರು.

ನಂಜನಗೂಡಿನಲ್ಲಿ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಸೋಲುಣ್ಣುವುದು ಎಂದು ಕೆಪಿಸಿಸಿಯ ಮಾಜಿ ಅಧ್ಯಕ್ಷರೂ ಆಗಿರುವ ಪೂಜಾರಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದರು. ಮಾಜಿ ಸಚಿವ ಶ್ರೀನಿವಾಸ್ ಪ್ರಸಾಧ್ ಅವರು ಕಾಂಗ್ರೆಸ್ ತೊರೆದು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವುದರಿಂದ ಈ ಕ್ಷೇತ್ರದಲ್ಲಿ ಮರುಚುನಾವಣೆ ನಡೆಯಲಿದೆ.