ರಣತಂತ್ರ ರೂಪಿಸಲು ಪಿಆರ್ ಏಜೆನ್ಸಿ ಮೊರೆ ಹೋಗುತ್ತಿರುವ ಚುನಾವಣಾ ಆಕಾಂಕ್ಷಿಗಳು

ಬೆಂಗಳೂರು : ಚುನಾವಣೆಗಳು ಹತ್ತಿರ ಬರಲಾರಂಭಿಸಿದಂತೆಯೇ ಎಲ್ಲಾ ಪಕ್ಷಗಳ ರಾಜಕಾರಣಿಗಳು ತಾವು ಸ್ಪರ್ಧಿಸಲಿಚ್ಛಿಸುವ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲು, ಅಗತ್ಯ ಮಾಹಿತಿ ಸಂಗ್ರಹಿಸಲು, ಪ್ರಣಾಳಿಕೆ ಸಿದ್ಧಪಡಿಸಲು ಹಾಗೂ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಪಬ್ಲಿಕ್ ರಿಲೇಶನ್ಸ್ ಏಜನ್ಸಿಗಳ ಮೊರೆ ಹೋಗಲಾರಂಭಿಸಿದ್ದಾರೆ.

ಸಾರ್ವಜನಿಕ ಸಂಪರ್ಕ, ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣ ಅಭಿಯಾನಗಳ ಮಹತ್ವವನ್ನು ಅರಿತಿರುವ ಆಕಾಂಕ್ಷಿಗಳು ತಮ್ಮ ಚುನಾವಣಾ ರಣತಂತ್ರಗಳನ್ನು ಹೆಣೆಯುವ ಜವಾಬ್ದಾರಿಯನ್ನೂ ಈ ಪಿಆರ್ ಏಜನ್ಸಿಗಳ ವೃತ್ತಿಪರರಿಗೇ ವಹಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಪಿಆರ್ ತಂತ್ರಗಾರಿಕೆ 2014ರ ಚುನಾವಣೆಯಲ್ಲಿ ಫಲಪ್ರದವಾಗಿರುವ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ನಾಯಕರು ಇದೇ ಮಾದರಿಯಲ್ಲಿ ಮುಂದುವರಿಯಲು ಇಚ್ಛಿಸುತ್ತಿರುವುದು ಕಂಡು ಬರುತ್ತಿದೆ. ಆದರೆ ಯಾವೊಬ್ಬ ರಾಜಕಾರಣಿಯೂ ತಾವು ತಮ್ಮ ಇಮೇಜ್ ವೃದ್ಧಿಸಲು ಯಾವ ಏಜನ್ಸಿಗೆ ಮೊರೆ ಹೋಗಿದ್ದೇವೆಂಬುದನ್ನು ಬಹಿರಂಗಪಡಿಸಲು ಮನಸ್ಸು ಮಾಡುತ್ತಿಲ್ಲ. ಸಮೀಕ್ಷೆಯ ಮೂಲಕ ಸಂಗ್ರಹಿಸಿದ ಅಂಕಿಸಂಖ್ಯೆಗಳು ಅಭ್ಯರ್ಥಿಗಳಿಗೆ ಪರಿಣಾಮಕಾರಿ ಪ್ರಣಾಳಿಕೆಗಳನ್ನು ಹಾಗೂ ತಮ್ಮ ಕ್ಷೇತ್ರದ ಅಭಿವೃದ್ಧಿ ಅಜೆಂಡಾ ಸಿದ್ಧಪಡಿಸಲು ಸಹಕಾರಿಯಾಗಿದೆ ಎಂದು ಪಿಆರ್ ಏಜನ್ಸಿಗಳು ಹೇಳುತ್ತಿವೆ.

ಹಿಂದೆಲ್ಲಾ ಕೇವಲ ಮಾಧ್ಯಮ ಪ್ರಚಾರ ಹಾಗೂ ಸಾರ್ವಜನಿಕ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದರೆ ಇತ್ತೀಚೆಗೆ

ಚುನಾವಣಾ ರಣತಂತ್ರ ಹೆಣೆಯುವುದೂ ಮುಖ್ಯವಾಗಿ ಬಿಟ್ಟಿದೆ.

“ಹೆಚ್ಚಿನ ರಾಜಕಾರಣಿಗಳಿಗೆ ತಮ್ಮ ಇಮೇಜ್ ವೃದ್ಧಿಸುವ ನಿಟ್ಟಿನಲ್ಲಿ ಹೊಸ ಹೊಸ ಯೋಚನೆಗಳು ಹೊಳೆಯುವುದು ಕಷ್ಟಸಾಧ್ಯವಾಗಿರುವುದರಿಂದ ಅವರು ಪಿಆರ್ ಸಂಸ್ಥೆಗಳ ಸಹಾಯ ಪಡೆಯುವುದನ್ನು ಅನಿವಾರ್ಯವಾಗಿಸಿದೆ. ಈ ಏಜನ್ಸಿಗಳು ಅವರ ಪರವಾಗಿ ಮಾಧ್ಯಮದೊಂದಿಗೆ ಸಂಪರ್ಕದಲ್ಲಿರುತ್ತವೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ತಿಳಿಸುತ್ತಾರೆ.

ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಕೂಡ ಖಾಸಗಿ ಪಿಆರ್ ಏಜನ್ಸಿಯೊಂದನ್ನು ಗೊತ್ತು ಪಡಿಸಿಕೊಂಡಿದ್ದು ಅವರ ಚುನಾವಣಾ ಪ್ರಚಾರಕ್ಕೆ ಅದು ಸಹಾಯ ಮಾಡುತ್ತಿದೆ. ಸಾಧಾರಣವಾಗಿ ಒಬ್ಬ ಅಭ್ಯರ್ಥಿ ಪಿಆರ್ ಏಜನ್ಸಿಗಾಗಿ ರೂ 5 ಲಕ್ಷದಿಂದ ರೂ 20 ಲಕ್ಷದ ತನಕ ವ್ಯಯಿಸಬೇಕಾಗಬಹುದು. ಅಭ್ಯರ್ಥಿಗಳ ನಿರೀಕ್ಷೆಗಳಿಗನುಗುಣವಾಗಿ ಈ ದರ ನಿಗದಿಯಾಗುತ್ತದೆ ಎಂದು ಮೂಲಗಳು ತಿಳಿಸುತ್ತವೆ.

 

 

 

LEAVE A REPLY