ಬಿಜೆಪಿಗೆ ಕೇವಲ 95-98 ಸ್ಥಾನ, ಕಾಂಗ್ರೆಸ್ಸಿಗೆ 85

ಗುಜರಾತ್ ಚುನಾವಣಾ ಫಲಿತಾಂಶದ ಮುನ್ನೋಟ

ರಾಜಕೀಯ ವಿಶ್ಲೇಷಕ ವಿದ್ಯುತ್ ಜೋಷಿ ಭವಿಷ್ಯ

ಅಹ್ಮದಾಬಾದ್ : “ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 115 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ಪಡೆಯಲಿರುವ ಸ್ಥಾನಗಳ ಸಂಖ್ಯೆ 95-98ಕ್ಕೆ ಕುಸಿಯಲಿದ್ದರೆ ಕಾಂಗ್ರೆಸ್ 85 ಸ್ಥಾನಗಳನ್ನು ಪಡೆಯಬಹುದು” ಎಂದು ಭಾವ್ನಗರ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಹಾಗೂ ಸೂರತ್ ನಗರದಲ್ಲಿರುವ ಸೆಂಟರ್ ಫಾರ್ ಸೋಶಿಯಲ್ ಸ್ಟಡೀಸ್ ಇಲ್ಲಿನ ಮಾಜಿ ನಿರ್ದೇಶಕರೂ ಆಗಿರುವ ವಿದ್ಯುತ್ ಜೋಷಿ ಭವಿಷ್ಯ ನುಡಿದಿದ್ದಾರೆ.

ರಾಜಕೀಯ ವಿಶ್ಲೇಷಕರೂ ಆಗಿರುವ ಜೋಷಿ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ಬಾರಿ ಬಿಜೆಪಿ ಕಡಿಮೆ ಸ್ಥಾನ ಪಡೆದರೂ 182 ಸದಸ್ಯ ಬಲ ಹೊಂದಿರುವ ವಿಧಾನಸಭೆಯಲ್ಲಿ ಸರಕಾರ ರಚಿಸಲು ಸಾಕಾಗುವಷ್ಟು ಸ್ಥಾನಗಳನ್ನು ಪಡೆಯಬಹುದು ಎಂದಿದ್ದಾರೆ.

ಬಿಜೆಪಿ ಈ ಬಾರಿ 95ರಿಂದ 98 ಸ್ಥಾನಗಳನ್ನು ಪಡೆದರೆ ಅದು ಕೇವಲ ಮೋದಿಯಿಂದಾಗಿ ಮಾತ್ರ ಎಂದು ಹೇಳಿದ ಅವರು, “ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಬದಿಗೆ ತಳ್ಳಿ ತಮ್ಮ ವರ್ಚಸ್ಸನ್ನೇ ಬಳಸಿ ಮತದಾರರ ಬಳಿ ಹೋದಂತೆ ಮೋದಿ ಕೂಡ ತಮ್ಮ ವೈಯಕ್ತಿಕ

ಚರಿಷ್ಮಾದಿಂದಲೇ ಮತದಾರರನ್ನು ಸೆಳೆಯುತ್ತಾರೆ, ಅವರ ಅನುಪಸ್ಥಿತಿಯಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ ಕೇವಲ 50 ಸ್ಥಾನ ಗಳಿಸಬಹುದು” ಎಂದೂ ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸ್ಥಾನಗಳು ದೊರೆತರೆ ಬಿಜೆಪಿಗೆ ಪಟಿದಾರ್ ಆಂದೋಲನ ಪ್ರಬಲವಾಗಿರುವ ಸೂರತ್ ಹೊರತುಪಡಿಸಿ ನಗರ ಪ್ರದೇಶಗಳಲ್ಲಿ ಹೆಚ್ಚು ಗೆಲುವು ದೊರೆಯುವುದೆಂದೂ ಜೋಷಿ ಹೇಳಿದ್ದಾರೆ. ಉಳಿದಂತೆ ಎನ್ಸಿಪಿ, ಎಎಪಿ ಹಾಗೂ ಶಂಕರ್ ಸಿಂಗ್ ವಘೇಲಾ ಅವರ ಪಕ್ಷಗಳು ಕೆಲ ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದೆಂದು ಅವರು ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಪಡೆಯಲಿರುವ ಸ್ಥಾನಗಳ ಸಂಖ್ಯೆ ಏಕೆ ಕುಸಿಯಬಹುದೆನ್ನುವ ಪ್ರಶ್ನೆಗೆ ಉತ್ತರಿಸಿದ ಜೋಷಿ, “ಆಡಳಿತ ವಿರೋಧಿ ಅಲೆ ಒಂದು ಕಾರಣವಾಗಿದೆ” ಎಂದರಲ್ಲದೆ ಒಂದು ಪಕ್ಷ ರಾಜ್ಯವೊಂದರಲ್ಲಿ 22 ವರ್ಷ ಆಡಳಿತದಲ್ಲಿರುವುದೇ ಇಂತಹ ಒಂದು ಅಲೆಗೆ ಕಾರಣವಾಗಬಹುದು.

“ರಾಜ್ಯದಲ್ಲಿರುವ ಹತ್ತು ಆಂದೋಲನಗಳಾದ ಪಟಿದಾರ್, ಒಬಿಸಿ, ದಲಿತ ಆಂದೋಲನ, ಸಣ್ಣ ವರ್ತಕರ, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಬುಲೆನ್ಸ್ ಸಿಬ್ಬಂದಿಯ ಆಂದೋಲನವೂ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಗೆ ಕಾರಣವಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2019ರ ಲೋಕಸಭಾ ಚುನಾವಣೆಯ ಬಗ್ಗೆಯೂ ಮಾತನಾಡಿದ ಜೋಷಿ, ಮೋದಿ  ಕಳೆದ ಬಾರಿಯಂತೆ 282 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದರು. “ಅವರೀಗ ಸುಸ್ತಾದವರಂತೆ ಕಾಣುತ್ತಿದ್ದಾರೆ. ಆರೆಸ್ಸೆಸ್ಸಿನ ಒಂದು ಬಣ ಅವರ ವಿರುದ್ಧವಾಗಿದೆ. ಅಷ್ಟೇ ಏಕೆ, ಮೋದಿಯ ಕಡು ವಿರೋಧಿ ಎಂದೇ ತಿಳಿಯಲಾದ ಆರೆಸ್ಸೆಸ್ ನಾಯಕ ಸಂಜಯ್ ಜೋಷಿ ಗುಜರಾತ್ ರಾಜ್ಯಕ್ಕೆ ಪ್ರತಿ ವಾರ ಭೇಟಿ ನೀಡುತ್ತಾರೆ” ಎಂದೂ ಅವರು ವಿವರಿಸಿದರು.