ಕಾರು ಗುದ್ದಿ ಪೊಲೀಸ್ ವಾಹನ ಚಾಲಕ ಗಂಭೀರ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರ ಸಂಚಾರ ಪೊಲೀಸ್ ಠಾಣೆಯ ಇಂಟರಸೆಪ್ಟರ್ ವಾಹನ ಚಾಲಕಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಂಟರಸೆಪ್ಟರ್ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಜಂಕ್ಷನಿನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ನಗರ ಸಂಚಾರಿ ಠಾಣೆಯ ಇಂಟರಸೆಪ್ಟರ್ ವಾಹನ ಚಾಲಕ, ಶಿರ್ವ ಸಮೀಪದ ಶಂಕರಪುರ ಶಿವಾನಂದ ನಗರ ಪಂಚರತ್ನ ಹೌಸ್ ನಿವಾಸಿ ಸತೀಶ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಸೋಮವಾರ ಬೆಳಿಗ್ಗೆ ಇಂಟರಸೆಪ್ಟರ್ ವಾಹನದಲ್ಲಿ ಕರ್ತವ್ಯಕ್ಕೆ ನೇಮಿಸಿದಂತೆ ಠಾಣಾ ಎಎಸೈಯೊಂದಿಗೆ ಬಿಜೆಪಿ ಪರಿವರ್ತನಾ ಯಾತ್ರೆಯ ರಥದ ಭದ್ರತೆ ಬಗ್ಗೆ ಸಂತೆಕಟ್ಟೆವರೆಗೆ ಹೋಗಿದ್ದಾರೆ. ಸಂತೆಕಟ್ಟೆ ಜಂಕ್ಷನ್ನಿನಿಂದ ಸ್ವಲ್ಪ ಮುಂದೆ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ 66ರ ಎಡಬದಿಯಲ್ಲಿ ಇಂಟರಸೆಪ್ಟರ್ ವಾಹನವನ್ನು ನಿಲ್ಲಿಸಿ, ವಾಹನದಿಂದ ಕೆಳಗೆ ಇಳಿದು ನಿಂತಿದ್ದ ವೇಳೆ, ಬಹ್ಮಾವರ ಕಡೆಯಿಂದ ಉಡುಪಿ

ಕಡೆಗೆ ಪರೀಕ್ಷಿತ್ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸತೀಶ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ಬಗ್ಗೆ ಸತೀಶ ನೀಡಿದ ದೂರಿನಂತೆ ಅಪಘಾತಕ್ಕೆ ಕಾರಣನಾದ ಆರೋಪಿ ಕಾರು ಚಾಲಕ ಪರೀಕ್ಷಿತ್ ವಿರುದ್ಧ ಉಡುಪಿ ನಗರ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.