ಚರ್ಚ್ ಕಾರ್ಯಕ್ರಮ ನಿಲ್ಲಿಸಿದ ಪೊಲೀಸರು

 ಯೋಗಿ ವಾಹಿನಿಯಿಂದ ಮತಾಂತರ ಆರೋಪ

ಲಕ್ನೋ : ಮಹಾರಾಜಗಂಜ್ ಪ್ರದೇಶದಲ್ಲಿರುವ ಬ್ರಿಟಿಷರ ಕಾಲದ ಚರ್ಚ್ ಒಂದರಲ್ಲಿ ಮತಾಂತರ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ 2002ರಲ್ಲಿ  ಸ್ಥಾಪಿತವಾಗಿರುವ ಹಿಂದೂ ಯುವ ವಾಹಿನಿ ಸಂಘಟನೆ ದೂರಿದ ಹಿನ್ನೆಲೆಯಲ್ಲಿ ಅಲ್ಲಿಗೆ  ದಾಳಿ ನಡೆಸಿದ ಪೊಲೀಸರು  10 ಮಂದಿ ಅಮೇರಿಕನ್ ಪ್ರವಾಸಿಗರೂ ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪ್ರಾರ್ಥನಾ ಸಭೆಯೊಂದನ್ನು ನಿಲ್ಲಿಸಿದ್ದಾರೆ.  ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿದ್ದಾರೆ ಎಂದು ಚರ್ಚಿನ ಪ್ಯಾಸ್ಟರ್ ಯೊಹನ್ನನ್ ಆದಂ ಅವರ ವಿರುದ್ಧ ಯುವ ವಾಹಿನಿ ದೂರು ದಾಖಲಿಸಿದ್ದರೆ ಪ್ಯಾಸ್ಟರ್ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ಗುಡ್ ಫ್ರೈಡೇಗೆ ಪೂರ್ವಭಾವಿಯಾಗಿ ನಡೆದ ಈ ಪ್ರಾರ್ಥನಾ ಸಭೆಗೆ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.