ಬಿ ಸಿ ರೋಡಿನಲ್ಲಿ ಪೊಲೀಸ್ ಬಂದೋಬಸ್ತ್ ತಾಲೀಮು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಬಿ ಸಿ ರೋಡಿನಲ್ಲಿ ಶನಿವಾರ ಬೆಳಿಗ್ಗೆಯೇ ಮತ್ತೆ ಪೊಲೀಸರಿಂದ ಬಂದೋಬಸ್ತ್ ರಂಗ ತಾಲೀಮು, ವಿಶೇಷ ಕವಾಯತು ದೃಶ್ಯ ಕಂಡುಬಂತು.

ಕಳೆದ ಮೇ ತಿಂಗಳ ಅಂತ್ಯದಲ್ಲಿ ಕಲ್ಲಡ್ಕದಲ್ಲಿ ಪ್ರಾರಂಭಗೊಂಡ ಕೋಮು ಸಂಘರ್ಷದ ಬಳಿಕ ಜೂನ್ ಹಾಗೂ ಜುಲೈ ಬರೋಬ್ಬರಿ ಎರಡು ತಿಂಗಳ ಕಾಲ ನಿಷೇಧಾಜ್ಞೆ ಅನುಭವಿಸಿದ ಬಂಟ್ವಾಳ ಆಗಸ್ಟ್ ತಿಂಗಳ ವೇಳೆಗೆ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಜನಜೀವನ ಸಹಜ ಸ್ಥಿತಿಗೆ ಮರಳಿದೆಯಷ್ಟೆ. ಆದರೂ ತಾಲೂಕಿನ ವಿಶೇಷ ಬಂದೋಬಸ್ತಿಗೆ ನಿಯೋಜಿಸಲ್ಪಟ್ಟಿರುವ ಹೆಚ್ಚುವರಿ ಪೊಲೀಸರು ಹಾಗೂ ರಾಜ್ಯ ಮೀಸಲು ಸಶಸ್ತ್ರ ಪಡೆ ಹಾಗೂ ಕ್ಷಿಪ್ರ ಕಾರ್ಯಪಡೆ (ಆರ್‍ಎಎಫ್) ಸಿಬ್ಬಂದಿಗಳನ್ನು ಇಲಾಖೆ ಹಿಂದಕ್ಕೆ ಪಡೆಯದೆ ಬಂದೋಬಸ್ತ್ ಮುಂದುವರಿಸಿತ್ತು. ಈ ನಡುವೆÉ ಸ್ವಾತಂತ್ರ್ಯ ದಿನಾಚರಣೆ, ಶ್ರೀ ಕೃಷ್ಣ ಜನ್ಮಾಷ್ಠಮಿ, ಗಣೇಶ ಚತುರ್ಥಿ, ಬಕ್ರೀದ್ ಮೊದಲಾದ ಹಬ್ಬ-ಹರಿದಿನಗಳು ಸಾಲು ಸಾಲಾಗಿ ಬರುತ್ತಿರುವ ಹಿನ್ನಲೆಯಲ್ಲಿ ಬಂಟ್ವಾಳದಲ್ಲಿ ಪೊಲೀಸರು ಮತ್ತೆ ರಂಗ ತಾಲೀಮು ಪ್ರಾರಂಭಿಸಿದ್ದಾರೆ.