ಸೋರುತ್ತಿದೆ ಮನೆ, ಗೋಡೆಗಳಲ್ಲಿ ಬಿರುಕು ಜನತೆಗೆ ಭದ್ರತೆ ನೀಡುವ ಪೊಲೀಸ್ ವಸತಿ ದುಃಸ್ಥಿತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಜನತೆಗೆ ರಕ್ಷಣೆ, ಸುರಕ್ಷತೆಯನ್ನು ನೀಡುವ ನಗರ ಪೊಲೀಸರಿಗೆ ಇನ್ನೂ ಸರಿಯಾದ ಸೂರಿಲ್ಲ. ಕೆಲಸ ಮುಗಿಸಿ ಮನೆಗೆ ಬರುವ ಪೊಲೀಸರು ತಮ್ಮ ಮನೆ ಕಂಡು ರೋದಿಸುತ್ತಿದ್ದಾರೆ. ನೆಹರೂ ಮೈದಾನದ ಬಳಿ ಇರುವ ಪೊಲೀಸ್ ಕ್ವಾರ್mರ್ಸ್ ಸ್ಥಿತಿ ನೋಡಿದರೆ ಯಾರಿಗೂ ಅಯ್ಯೋ ಅನ್ನಿಸದೇ ಇರದು.

ಈ ವಸತಿನಿಲಯಗಳನ್ನು ಕೆಲವೇ ದಶಕಗಳ ಹಿಂದೆ ನಿರ್ಮಿಸಲಾಗಿದೆ. ಮಳೆಗಾಲದಲ್ಲಂತೂ ಇವರ ಅವಸ್ಥೆ ಹೇಳತೀರದು. ಹೆಂಚಿನ ಮನೆಗಳು ಆಗಲೋ ಈಗಲೋ ಬೀಳುವ ಹಂತದಲ್ಲಿವೆ. ಸುಮಾರು 12ಕ್ಕೂ ಅಧಿಕ ಮನೆಗಳ ಅವಸ್ಥೆಯೂ ಇದೇ. ಹೆಂಚುಗಳು ಒಡೆದು ನೀರು ಒಳಗೆ ಸೋರುತ್ತಿರುವುದನ್ನು ತಡೆಗಟ್ಟಲು ಟರ್ಪಾಲ್ ಹೊದಿಸಲಾಗಿದೆ. ಕೆಲವು ಕಡೆ ತಗಡಿನ ಶೀಟ್ ಸಿಲುಕಿಸಲಾಗಿದೆ.

ಒಂದು ಪುಟ್ಟ ಮನೆ. ಅದರಲ್ಲಿ ಒಂದು ರೂಂ, ಹಾಲ್, ಅಡುಗೆ ಕೋಣೆ ಮತ್ತು ಶೌಚಾಲಯವಿದೆ. ಪುಟ್ಟ ಮಕ್ಕಳು ಸೇರಿದಂತೆ ಪ್ರತೀ ಮನೆಯಲ್ಲೂ ಐವರು ವಾಸಿಸುತ್ತಿದ್ದಾರೆ. ಮಳೆ ನೀರು ಸೋರಿಕೆಯಾದರೆ ನಮಗೆ ಮಲಗುವುದಕ್ಕೆ ಜಾಗ ಇಲ್ಲ. ನೀರು ಸೋರದಂತೆ ಟರ್ಪಾಲ್ ಹಾಕಿದ್ದೇವೆ ಎನ್ನುತ್ತಾರೆ ಪೇದೆಯೊಬ್ಬರ ಪತ್ನಿ. ಕಳೆದ ನಾಲ್ಕು ವರ್ಷಗಳಿಂದ ಅವರು ಇದೇ ಮನೆಯಲ್ಲಿ ಇನ್ನಿಲ್ಲದ ಕಷ್ಟದ ಜೀವನ ಅನುಭವಿಸುತ್ತಿದ್ದಾರೆ. ಉಳಿದ ಮನೆಗಳದ್ದೂ ಇದೇ ಪರಿಸ್ಥಿತಿ. ಭಾರೀ ಗಾಳಿ ಬಂದರೆ ಮೇಲ್ಘಾವಣಿ ಶಿಥಿಲಗೊಂಡಿರುವ ಕಾರಣ ಹೆಂಚುಗಳು ಧರಾಶಾಹಿಯಾಗುತ್ತವೆ. ಕನಿಷ್ಠ ಸರಿಯಾದ ಬಾಗಿಲೂ ಇಲ್ಲ.

ಡಿಸಿಪಿ ಶಾಂತರಾಜು ಅವರನ್ನು ಪ್ರಶ್ನಿಸಿದರೆ, “ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಬರುವಂತೆ ನಾವು 60 ಮಲ್ಟಿಸ್ಟೋರ್ ಅಪಾರ್ಟಮೆಂಟ್ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ. ಪಣಂಬೂರು ಮತ್ತು ಅತ್ತಾವರದಲ್ಲಿ ನಿರ್ಮಾಣವಾದರೆ ಬಹುತೇಕ ಪೊಲೀಸರು ಈ ಕಷ್ಟದಿಂದ ಹೊರಬರಲಿದ್ದಾರೆ” ಎನ್ನುತ್ತಾರೆ.