ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳ ವಿಚಾರಣೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಕೋರ್ಟಿಗೆ ಶರಣಾಗಿ ಬಳಿಕ ಪೊಲೀಸ್ ವಶದಲ್ಲಿರುವ ನಾಲ್ವರು ಆರೋಪಿಗಳನ್ನು ಶನಿವಾರ ಪೊಲೀಸರು ಘಟನಾ ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಿದರು.

ಪ್ರಶಾಂತ್ ಪೂಜಾರಿಯನ್ನು ಕಡಿದ ಪ್ರಮುಖ ಆರೋಪಿ ಅಕ್ಬರ್ ವಳಚ್ಚಿಲ್ (30), ಸಿರಾಜ್ ಉಳ್ಳಾಲ್ (28) ಮತ್ತು ಇವರಿಗೆ ಸಹಕರಿಸಿದ್ದ ಅನ್ವರ್ ಬಜಪೆ, ತಾಜುದ್ದೀನ್ ಬಜಪೆ ಇವರನ್ನು ಪೊಲೀಸರು ಶನಿವಾರ ವಿಚಾರಣೆಗೊಳಪಡಿಸಿದರು.

2015ರ ಅಕ್ಟೋಬರ್ 9ರಂದು ಬಜರಂಗದಳ ಕಾರ್ಯಕರ್ತ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿಯನ್ನು ಸಮಾಜ ಮಂದಿರಕ್ಕೆ ತಿರುಗುವ ದಾರಿ ಬಳಿ ಮಾರಕಾಯುಧದಿಂದ ಕಡಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಹಲವರನ್ನು ಈಗಾಗಲೇ ಬಂಧಿಸಲಾಗಿತ್ತು. ಈ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಕೋರ್ಟಿಗೆ ಶರಣಾದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನಂತರ ಹೆಚ್ಚಿನ ವಿಚಾರಣೆಗಾಗಿ ಇವರನ್ನು ಜೂನ್ 20ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

 ಇನ್ನು ಮೂವರ ಬಂಧನ ಬಾಕಿ

ಪ್ರಕರಣದ 17 ಆರೋಪಿಗಳಲ್ಲಿ ಈ ಹಿಂದೆ 10 ಆರೋಪಿಗಳ ಬಂಧನವಾಗಿತ್ತು. ಅದರಲ್ಲಿ ಮುಸ್ತಾಫ ಕಾವೂರು ಎಂಬಾತ ಮೈಸೂರಿನ ಸಬ್ ಜೈಲಿನಲ್ಲಿ ಪ್ರಶಾಂತ್ ಪೂಜಾರಿಯ ಸ್ನೇಹಿತ ಕಿರಣ್ ಶೆಟ್ಟಿ ಎಂಬಾತನಿಂದ ಹತ್ಯೆಗೀಡಾಗಿದ್ದ. ಉಳಿದ 9 ಮಂದಿ ಆರೋಪಿಗಳಲ್ಲಿ ಹೆಚ್ಚಿನವರಿಗೆ ಜಾಮೀನು ಸಿಕ್ಕಿದೆ. ಪ್ರಕರಣದ ಆರೋಪಿಗಳಾದ ನವಾಜ್ ಮಂಗಳೂರು, ಇರ್ಷಾದ್ ಬಜ್ಪೆ, ಮುಸ್ತಾಫ್ ಬಜ್ಪೆ ಇನ್ನೂ ತಲೆಮರೆಸಿಕೊಂಡಿದ್ದಾರೆ.