ಮಾಡಲು ಕೆಲಸವಿಲ್ಲದೆ ಪೊಲೀಸ್ ದೂರು ಪ್ರಾಧಿಕಾರಕ್ಕೆ ನ್ಯಾ ಪಚಾಪುರೆ ರಾಜೀನಾಮೆ

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷ ಜಸ್ಟಿಸ್ ಎ ಎಸ್ ಪಚಾಪುರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಹಳಷ್ಟು ಸಮಯ ಯಾವುದೇ ಕೆಲಸವಿಲ್ಲದೇ ಇರುವುದಕ್ಕೆ ಬೇಸತ್ತು ಅವರು ರಾಜೀನಾಮೆ ನೀಡಿದ್ದಾಗಿ ತಿಳಿದು ಬಂದಿದೆ.

ಆದರೆ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ ಕುಂಟಿಯ ಅವರಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ ಪಚಾಪುರೆ ಅವರು ತಾವು ನ್ಯಾಯಾಧೀಶ ಹುದ್ದೆಯಿಂದ ನಿವೃತ್ತಿಯಾದ ಬಳಿಕ ನೆಲೆಯೂರಿದ್ದ ಬೆಳಗಾವಿಗೆ ಪ್ರತಿ ವಾರಾಂತ್ಯ ಹೋಗಲು ಅಸಾಧ್ಯವಾಗಿರುವುದರಿಂದ ಹುದ್ದೆ ತ್ಯಜಿಸುತ್ತಿರುವುದಾಗಿ ತಿಳಿಸಿದ್ದಾರೆ.

ಅವರು ಹತ್ತು ದಿನಗಳ ಹಿಂದೆಯೇ ರಾಜೀನಾಮೆ ನೀಡಿದ್ದರು. ಪೊಲೀಸ್ ದೂರುಗಳ ಪ್ರಾಧಿಕಾರ ಅಧ್ಯಕ್ಷರಾಗಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನೇಮಕಗೊಂಡಿದ್ದ ಅವರಿಗೆ ನ್ಯಾಯಾಧೀಶರೊಬ್ಬರ ವೇತನ ಶ್ರೇಣಿ ದೊರೆಯುತ್ತಿತ್ತು. ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ತಿಳಿಯಲು 27 ಜಿಲ್ಲೆಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದರೂ ಅವರಿಗೆ ಮಾಡಲು ಕೆಲಸ ಅತ್ಯಂತ ಕಡಿಮೆಯಿದ್ದುದರಿಂದ ಅವರು ಅಸಂತುಷ್ಟರಾಗಿದ್ದರೆಂದು ಹೇಳಲಾಗಿದೆ.

ನ್ಯಾಯಾಧೀಶರಾಗಿದ್ದಾಗ ಅವರು ದಿನವೊಂದಕ್ಕೆ ಎಂಟು ಗಂಟೆಗಳ ಕಾಲ ದುಡಿಯುತ್ತಿದ್ದರು. ಪ್ರಾಧಿಕಾರಕ್ಕೆ ಕೆಲವೇ ಕೆಲವು ದೂರುಗಳು ಬರುತ್ತಿದ್ದವಲ್ಲದೆ ದೂರುಗಳ ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವುದಷ್ಟೇ ಪ್ರಾಧಿಕಾರದ ಕರ್ತವ್ಯವಾಗಿತ್ತು.

ಹೆಚ್ಚಿನ ದೂರುಗಳಿಲ್ಲ : ಪೊಲೀಸ್ ದೂರು ಪ್ರಾಧಿಕಾರದ ಬಳಿ ರಾಜ್ಯದ ಹೆಚ್ಚಿನ ಜಿಲ್ಲೆಗಳಿಂದ ಯಾವುದೇ ದೂರು ಇಲ್ಲವಾದರೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಅದು ಸುಮಾರು 10 ದೂರುಗಳನ್ನು ಪಡೆದಿದೆ. ಮೇಲಾಗಿ ಎಸ್ಪಿ ಶ್ರೇಣಿಯ ಕೆಳಗಿನ ಹುದ್ದೆಗಳ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಪ್ರಾಧಿಕಾರ ತನಿಖೆ ನಡೆಸುವುದಿಲ್ಲ ಎಂಬ ವಿಚಾರದ ಬಗ್ಗೆ ಅರಿವಿಲ್ಲದೆ ಅವುಗಳನ್ನೂ ರಾಜ್ಯ ಪ್ರಾಧಿಕಾರಕ್ಕೆ ಕಳುಹಿಸ ಲಾಗುತ್ತಿರುವುದೂ ಗಮನಕ್ಕೆ  ಬಂದಿದೆ. ನಿಯಮಗಳಂತೆ ಪ್ರಾಧಿಕಾರವು ಎಸ್ಪಿ ಶ್ರೇಣಿಗಿಂತ ಮೇಲಿರುವ ಅಧಿಕಾರಿಗಳ ವಿರುದ್ಧದ ಗಂಭೀರ ಆರೋಪಗಳಾದ ಕಸ್ಟಡಿ ಸಾವು, ದೌರ್ಜನ್ಯ ಅಥವಾ ಅತ್ಯಾಚಾರ ಪ್ರಕರರಣಗಳನ್ನು ತನಿಖೆ  ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರವiಕ್ಕೆ ಶಿಫಾರಸು ಮಾಡುತ್ತದೆ.