ನೋಟು ನಿಷೇಧ ಮಾಹಿತಿ ಇಲ್ಲವೆಂದ ಪ್ರಧಾನಿ ಕಚೇರಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನವಂಬರ್ 8ರಂದು 1,000 ಮತ್ತು 500 ರೂಪಾಯಿ ನೋಟು ನಿಷೇಧಿಸುವ ಮುಂಚೆ ಅಧಿಕಾರಿಗಳನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಪ್ರಧಾನಮಂತ್ರಿ ಕಚೇರಿ (ಪಿಎಂಒ) ಹೇಳಿದೆ.

ಏಕಾಏಕಿ ಪ್ರಕಟಣೆ ಮುಂಚೆ ಪ್ರಧಾನಿಯವರು ಮುಖ್ಯ ಹಣಕಾಸು ಸಲಹೆಗಾರ (ಸಿಇಎ) ಮತ್ತು ಹಣಕಾಸು ಸಚಿವರನ್ನು ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೂ ಪ್ರಧಾನಿ ಕಚೇರಿ ಉತ್ತರಿಸಲು ನಿರಾಕರಿಸಿದೆ. ಈ ಪ್ರಶ್ನೆಗೆ ಆರ್ ಟಿ ಐ ಕಾಯ್ದೆಯಲ್ಲಿ ಮಾಹಿತಿ ವ್ಯಾಖ್ಯಾನಿಸುವ ಅವಕಾಶವಿಲ್ಲ ಎಂದು ಪಿಎಂಒ ತಿಳಿಸಿದೆ.

ಸಾವಿರ ಮತ್ತು 500 ರೂಪಾಯಿ ನೋಟು ನಿಷೇಧಿಸಿ, ಹೊಸ ನೋಟುಗಳ ಚಲಾವಣೆಯ ಪ್ರಕಟಣೆ ಹೊರಡಿಸುವ ಮುಂಚೆ, ಈ ವಿಷಯದಲ್ಲಿ ಯಾವುದಾದರೂ ಸಭೆ ನಡೆದಿದೆಯೇ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ. ಹೊಸ 2,000 ರೂ ಕರೆನ್ಸಿ ಚಲಾವಣೆಗೆ ಮುಂಚೆ ದೇಶದ ಎಲ್ಲ ಎಟಿಎಂಗಳ ಪುನರ್ ಸಿದ್ಧಪಡಿಸುವ ಅಗತ್ಯವಿತ್ತೆಂಬುದನ್ನು ಪರಿಗಣಿಸಲಾಗಿತ್ತೇ ಎಂಬುದನ್ನು ತಿಳಿಯಲು ಬಯಸಿರುವ ಅರ್ಜಿದಾರರು, ಪ್ರಧಾನಿ ನಿರ್ಧಾರಕ್ಕೆ ಯಾವುದೇ ಅಧಿಕಾರಿ ಅಥವಾ ಸಚಿವರಿಂದ ವಿರೋಧ ವ್ಯಕ್ತವಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.

ಹಳೆ ನೋಟುಗಳ ಬದಲಿಗೆ ಹೊಸ ನೋಟು ಜಾರಿಗೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದರ ನಿಖರವಾದ ಅಂದಾಜಿತ್ತೇ ಎಂದವರು ಕೇಳಿದ್ದಾರೆ. ಈ ಎಲ್ಲ ಪ್ರಶ್ನೆಗೆ ಆರ್ ಟಿ ಐ ಕಾಯ್ದೆಯಡಿ ಉತ್ತರಿಸಲು ಸಾಧ್ಯವಿಲ್ಲ ಎಂದು ಪಿಎಂಒ ಹೇಳಿ ಕೈತೊಳೆದುಕೊಂಡಿದೆ. ಈ ರೀತಿಯ ಪ್ರಶ್ನೆಗೆ ಉತ್ತರಿಸಲು ಆರ್ ಬಿ ಐ ಕೂಡ ನಿರಾಕರಿಸಿತ್ತು.