ಅತ್ತೂರು ಸೈಂಟ್ ಲಾರೆನ್ಸ್ ಕ್ಷೇತ್ರದಲ್ಲಿ ಮೊಬೈಲ್ ಟವರ್ ನಿರ್ಮಿಸಲು ಪ್ರಧಾನಿ ಪತ್ರ

ಕಾರ್ಕಳ : ತಾಲೂಕಿನ ಅತ್ತೂರು ಸೈಂಟ್ ಲಾರೆನ್ಸ್ ಮೈನರ್ ಬಸಿಲಿಕಾದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸಂಬಂಧಿತ ಇಲಾಖೆಗೆ ಪತ್ರ ಬರೆದು ಇಲ್ಲಿ ಮೊಬೈಲ್ ಟವರ್ ನಿರ್ಮಾಣ  ಮಾಡುವಂತೆ ಸೂಚಿಸಿದ್ದಾರೆ.

ಸಾವಿರಾರು ಮಂದಿ ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯ್ಯುತ್ತಿರುವ ಅತ್ತೂರು ಕ್ಷೇತ್ರದಲ್ಲಿ ಮೊಬೈಲ್ ಟವರ್ ಇಲ್ಲದ ಕಾರಣ ಇಲ್ಲಿ ಮೊಬೈಲ್ ಬಳಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕಾರ್ಯಾಲಯದಿಂದ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬಂದಿದ್ದು, ತಾತ್ಕಾಲಿಕ ಮೊಬೈಲ್ ಟವರ್ ನಿರ್ಮಾಣಗೊಳ್ಳುತ್ತಿದೆ.

ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ, ಕಾರ್ಕಳ ಪೇಟೆಯಿಂದ 5 ಕಿ ಮೀ ದೂರವಿರುವ ಇಲ್ಲಿ ಮೊಬೈಲ್ ನೆಟ್ವರ್ಕ್ ಸಿಗುತ್ತಿರಲಿಲ್ಲ. ಇಲ್ಲಿನ ಫಾದರ್ ಫಾ ಜೋರ್ಜ್ ಡಿಸೋಜ ಅವರು ಹಲವು ಮನವಿಗಳನ್ನು ಚುನಾಯಿತ ಜನಪ್ರತಿನಿಧಿಗಳಿಗೆ ಬರೆದಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಇದರಿಂದ ಅವರು ಕೇಂದ್ರದ ದೂರವಾಣಿ ಸಂಪರ್ಕ ಇಲಾಖೆ ಸಚಿವ ಮನೋಜ್ ಸಿನ್ಹಾರಿಗೆ ಆ 21ರಂದು ಪತ್ರ ಬರೆದಿದ್ದರು. ಆದರೂ ಏನೂ ಪ್ರತಿಕ್ರಿಯೆ ಬಂದಿರಲಿಲ್ಲ.

ಕೊನೆಗೆ ಜಾರ್ಜ್ ಡಿಸೋಜ ನೇರವಾಗಿ ಪ್ರಧಾನಿ ಮೋದಿ ಅವರಿಗೆ ಸೆ 2ರಂದು ಪತ್ರ ಬರೆದಿದ್ದು, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಕೂಡಲೇ ಇವರ ಮನವಿಗೆ ಸ್ಪಂದಿಸಿದ್ದಾರೆ.