ಉಪ-ಚುನಾವಣೆ : ಪಿಡಬ್ಲ್ಯೂಡಿ ಸಚಿವರ ಪುತ್ರ ಬೋಸ್ ಸ್ಪರ್ಧೆಗೆ ಸೀಎಂ ಮನಸ್ಸು

ಬೆಂಗಳೂರು : ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಂಜನಗೂಡು ಅಸೆಂಬ್ಲಿ ಕ್ಷೇತ್ರದ ಉಪ-ಚುನಾವಣೆಗಾಗಿ ಪಿಡಬ್ಲ್ಯೂಡಿ ಮತ್ತು ಜಿಲ್ಲಾ ಉಸ್ತುವಾರಿ ಮಹದೇವಪ್ಪರ ಪುತ್ರ ಸುನೀಲ್ ಬೋಸ್ ಕಣಕ್ಕಿಳಿಸಲು ಸೀಎಂ ಸಿದ್ದರಾಮಯ್ಯ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ಸಿನ ಹಿರಿಯ ಮುಖಂಡ ಶ್ರೀನಿವಾಸ ಪ್ರಸಾದ್ ಇತ್ತೀಚೆಗೆ ರಾಜೀನಾಮೆ ನೀಡಿದ ಬಳಿಕ ನಂಗಜಗೂಡು ಕ್ಷೇತ್ರ ಖಾಲಿ ಬಿದ್ದಿದೆ. ಈ ಕ್ಷೇತ್ರ ಮೂಲಕ ಸಚಿವ ಮಹದೇವಪ್ಪ ತನ್ನ ಮಗನ ರಾಜಕೀಯ ಪ್ರವೇಶ ಇಚ್ಚಿಸಿದ್ದಾರೆಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಈ ವಿಷಯದಲ್ಲಿ ಸೀಎಂ ಮೈಸೂರಿನಲ್ಲಿ ಪಕ್ಷದ ಕೆಲವು ನಾಯಕರೊಂದಿಗೆ ಚರ್ಚಿಸಿ, ಸಹಕಾರ ಬಯಸಿದ್ದಾರೆ.

ಬೋಸ್ ಅಕ್ರಮ ಮರಳುಗಾರಿಕೆಯಲ್ಲೂ ಶಾಮೀಲಾಗಿದ್ದು, ಟೀನರಸೀಪುರಲ್ಲಿ ಮಗ ನಡೆಸುತ್ತಿರುವ ಅಕ್ರಮ ಮರಳುಗಾರಿಕೆ ಸಚಿವರೇ ಬೆಂಬಲ ನೀಡಿದ್ದಾರೆಂದು ಬಿಜೆಪಿ ಆರೋಪಿಸಿದೆ.

ಇದೇ ವೇಳೆ, ಪಕ್ಷದ ಕೆಲವರು ಮಹದೇವಪ್ಪರ ಪ್ರಯತ್ನಕ್ಕೆ ಅಡ್ಡಗಾಲಿಟ್ಟಿದ್ದಾರೆ. “ಬೋಸಗೆ ರಾಜಕೀಯ ಅನುಭವವವಿಲ್ಲ. ಒಂದೊಮ್ಮೆ ಶ್ರೀನಿವಾಸ ಪ್ರಸಾದ್ ಪುನಾ ಚುನಾವಣೆಗೆ ನಿಂತರೆ ಅವರಿಗೆ ಬೋಸ್ ಪ್ರತಿಸ್ಪರ್ಧಿಯಾಗಲಾರರು. ಪ್ರಸಾದಗೆ ಪೈಪೋಟಿ ನೀಡಲು ಹಿರಿಯ ನಾಯಕರನ್ನು ಕಣಕ್ಕಿಳಿಸಬೇಕು” ಎಂದು ಆ ನಾಯಕರು ಹೇಳಿದ್ದಾರೆ. ಉಪ-ಚುನಾವಣೆಗಾಗಿ ಸಂಸದ ಶಿವಣ್ಣ, ಸಿದ್ದರಾಜು, ಭಾರತಿಶಂಕರ್, ಗೋವಿಂದಯ್ಯ ಮತ್ತು ಶಿವಮಲ್ಲು ಹೆಸರು ಕೇಳಿಬರುತ್ತಿದೆ.