`ನನಗೂ ಗೋವಿನಂತೆಯೇ ರಕ್ಷಣೆ ನೀಡಿ’

ಗೋ ರಕ್ಷಣೆಯ ವಿಚಾರದಲ್ಲಿ ಕೆಲವರು ಅದೆಷ್ಟು ಕಂಕಣಬದ್ಧರಾಗಿದ್ದಾರೆಂದರೆ ಅಷ್ಟೇ ಉತ್ಸಾಹದಿಂದ ಮಹಿಳೆಯರ ಸುರಕ್ಷತೆಗೂ ಕ್ರಮ ಕೈಗೊಂಡರೆ ಉತ್ತಮವಲ್ಲವೇ ?

  • ಶೋಭಾ ಡೇ

ನನ್ನನ್ನು `ಗೋ’ ಎಂದು ಕರೆಯಿರಿ. ಅದನ್ನೊಂದು ಹೊಗಳಿಕೆ ಎಂದು ತಿಳಿಯುತ್ತೇನೆ, ಖಂಡಿತವಾಗಿಯೂ.  ಈಗಿನ ದುಃಸ್ಥಿತಿಯಿಂದ ತಮ್ಮನ್ನು ಅದು ಸ್ವಲ್ಪವಾದರೂ ಪಾರು ಮಾಡ ಹುದೆಂದಾದರೆ ದೇಶದಾದ್ಯಂತವಿರುವ ಕೋಟ್ಯಂತರ ಮಹಿಳೆಯರೂ ತಮ್ಮನ್ನು ಗೋವುಗಳಿಗೆ ಹೋಲಿಕೆ ಮಾಡಲು ಸಂತಸಪಡಬಹುದು. ಇಂದು ದೇಶದಲ್ಲಿ ಮಹಿಳೆಯರಿಗೆ  ಕೂಡ ದೊರೆಯದಂತಹ ಸವಲತ್ತುಗಳನ್ನು ಗೋವುಗಳು ಪಡೆಯುತ್ತಿವೆ.

ನನಗೂ ದನಗಳೆಂದರೆ ಬಹಳ ಇಷ್ಟ.  ನನ್ನ ಫಾರ್ಮ್ ಹೌಸಿನಲ್ಲಿ ಕೆಲವಾದರೂ ಗೋವುಗಳನ್ನು ಸಾಕಬೇಕೆಂಬುದು ನನ್ನ ಇಚ್ಛೆ. ಆದರೆ ನನ್ನ ಈ ಸಣ್ಣ ಇಚ್ಛೆಯನ್ನು ನನ್ನ ಕುಟುಂಬ ಇಲ್ಲಿಯತನಕ ಪೂರೈಸಿಲ್ಲ. ಪ್ರಾಯಶಃ ಮನೆಯೊಂದಕ್ಕೆ ಒಂದು ದನವೇ ಸಾಕು ಎಂದು ಅವರು ನಂಬಿದ್ದಾರೆ. ದೇವಳದಲ್ಲಿರುವ ಗೋವುಗಳಿಗೆ ನಾನು ಆಗಾಗ ಆಹಾರ ನೀಡುತ್ತೇನೆ. ಹಾಗೆ ಮಾಡಿದರೆ ದೇವರಿಗೆ ನಾನು ಮಾಡಿದ ಪ್ರಾರ್ಥನೆ ಈಡೇರುವುದೆಂದಲ್ಲ. ಅವುಗಳು ಆಹಾರವನ್ನು ಶಿಸ್ತುಬದ್ಧವಾಗಿ ಮೆಲ್ಲುವುದನ್ನು ನೋಡಿ ಖುಷಿಯಾಗುತ್ತದೆ.  ಅಷ್ಟೇ ಪ್ರೀತಿಯಿಂದ ನನಗೂ ಯಾರಾದರೂ ಆಹಾರ ನೀಡಬೇಕು ಎಂಬುದು ನನ್ನ ಬಯಕೆ. ಇತ್ತೀಚೆಗಂತೂ ಗೋವುಗಳ ಬಗ್ಗೆ ನನಗೆ ಮತ್ಸರವೇ ಉಂಟಾಗಿತ್ತು. ನಮ್ಮ ಮೇಲೆ ಎಷ್ಟೇ ಅನಾಚಾರಗಳು ನಡೆದರೂ ಯಾರೂ ಏನೂ ಮಾಡುತ್ತಿಲ್ಲವಲ್ಲ ಎಂಬ ಕಳವಳ. ಆದರೆ ಗೋವುಗಳು ಹಾಗಲ್ಲ. ಅವುಗಳಿಗೇನಾದರೂ ಆದರೆ ಕೃತ್ಯಗೈದವರಿಗೆ ತಪರಾಕಿ ಬೀಳುತ್ತದೆ. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆದಾಗ ಅವುಗಳು  ಕಾಗದದಲ್ಲಿನ ದಾಖಲೆಗಳಿಗೆ ಇನ್ನೊಂದು ಸೇರ್ಪಡೆಯಷ್ಟೇ.

ಇತ್ತೀಚೆಗೆ  ಹರಿದಾಡುತ್ತಿರುವ ಒಂದು ಸಂದೇಶ ಹೀಗೆ ಹೇಳಿತ್ತು  – “ದಯವಿಟ್ಟು ಮುಂದಿನ ಜನ್ಮದಲ್ಲಾದರೂ ದನವಾಗಿ ಹುಟ್ಟುವಂತೆ ಪ್ರಾರ್ಥಿಸಿ. ನಿಮಗೆ ಹಲವಾರು ಸವಲತ್ತುಗಳು ದೊರೆಯುತ್ತವೆ ಹಾಗೂ ನೀವು ಸುರಕ್ಷಿತರಾಗಿರುತ್ತೀರಿ.”

ಅದೇನೋ ಸರಿ. ಆದರೆ ರಸ್ತೆಗಳಲ್ಲಿನ ದನಗಳಿಗೆ ದೊರೆತ ರಕ್ಷಣೆಯಂತೆ ಈ ಜನ್ಮದಲ್ಲಿ ರಸ್ತೆಗಳಲ್ಲಿ ನಡೆದಾಡುವ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದೇ ?

ಇತ್ತೀಚೆಗೆ ಕೆಲ ರಾಜಕಾರಣಿಗಳು ಗೋಹತ್ಯೆ ನಡೆಸುವವರಿಗೆ ಘೋಷಿಸುತ್ತಿರುವ ಕಠಿಣ ಶಿಕ್ಷೆಗಳ ಬಗೆ ಯೋಚಿಸಿದೆ. ಒಬ್ಬ ನಾಯಕರಂತೂ “ಗೋಹತ್ಯೆ ನಡೆಸುವವರನ್ನು ಗಲ್ಲಿಗೇರಿಸುತ್ತೇನೆ” ಎಂದು ಗುಡುಗಿದರು. ಆದರೆ ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರ ವಿರುದ್ಧ ಇಂತಹ ಯಾವುದೇ ಹೇಳಿಕೆ ಬಂದಿಲ್ಲವಲ್ಲ ? ಗೋರಕ್ಷಣೆಯ ಬಗ್ಗೆಯೇ ಹೆಚ್ಚಿನ ಕಾಳಜಿ ವಹಿಸುತ್ತಿರುವ ನಾವು ಅದೇ ಸಮಯ ಮಹಿಳೆಯರ ಸುರಕ್ಷತೆಗಾಗಿ ಕೆಲ ನಿಯಮಗಳನ್ನು ಕಠಿಣಗೊಳಿಸಬಾರದೇಕೆ ?

ಅದಕ್ಕೆಂದೇ ನಾನು ಹೇಳುತ್ತಿರುವುದು – ದಯವಿಟ್ಟು ನನ್ನನ್ನು ದನವೆಂದು ಪರಿಗಣಿಸಿ. ನಾನು ರಸ್ತೆಗಳಲ್ಲಿ ಅಡ್ಡಾದಿಡ್ಡಿ ಹೋಗುವುದಿಲ್ಲ, ಶೌಚಾಲಯಗಳನ್ನು ಉಪಯೋಗಿಸುತ್ತೇನೆ ಹಾಗೂ ಸ್ವಚ್ಛ ಭಾರತ ಅಭಿಯಾನದ ಧ್ಯೇಯವನ್ನು ಕಾಯಾ ವಾಚಾ ಮನಸಾ ಪಾಲಿಸುತ್ತೇನೆ ಎಂದು ಹೇಳಬಯಸುತ್ತೇನೆ.