ಗಾಂಧಿಕಟ್ಟೆ ಬಳಿ ಇರುವ ಮರ ತೆರವಿಗೆ ಮನವಿ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಇಲ್ಲಿನ ಗಾಂಧಿಕಟ್ಟೆ ಬಳಿ ಇರುವ ಅಶ್ವತ್ಥ ಮರ ಅಪಾಯಕಾರಿಯಾಗಿ ಪರಿಣಮಿಸಿದೆ. ಮರವನ್ನು ತೆರವು ಮಾಡುವಂತೆ ಈ ಹಿಂದೆಯೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದು, ಈ ಬಾರಿಯ ಮಳೆಗಾಲಕ್ಕೆ ಮರ ಶಿಥಿಲಗೊಂಡು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ. ಮರವನ್ನು ತಕ್ಷಣ ತೆರವು ಮಾಡಿ ಅಪಾಯವನ್ನು ತಡೆಯುವಂತೆ ಬನ್ನೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಪಾಟಾಳಿ ಉಪವಿಭಾಗಾಧಿಕಾರಿಗೆ  ಮನವಿ ಮಾಡಿದ್ದಾರೆ.

ಗಾಂಧೀಜಿಯವರು ಪುತ್ತೂರಿಗೆ ಬಂದ ಸ್ಮಾರಕವಾಗಿ ಗಾಂಧಿಕಟ್ಟೆಯನ್ನು ನಿರ್ಮಿಸಲಾಗಿದೆ. ಆ ಬಳಿಕ ಕಟ್ಟೆ ಬಳಿ ಗಿಡವನ್ನು ನೆಡಲಾಗಿದ್ದು ಅದು ಮರವಾಗಿ ಬೆಳೆದಿತ್ತು. ಮಳೆಗಾಲದಲ್ಲಿ ತಡರಾತ್ರಿ ಮರ ಗಾಳಿಗೆ ಉರುಳಿ ಬಿದ್ದ ಕಾರಣ ಯಾವುದೇ ಅಪಾಯ ಉಂಟಾಗಿರಲಿಲ್ಲ. ಆದರೆ ಆ ಬಳಿಕವೂ ಕಟ್ಟೆಯ ಬಳಿ ಮರ ಬೆಳದುನಿಂತಿದೆ. ಕಟ್ಟೆಯ ಸುತ್ತಲೂ ಕಾಂಕ್ರಿಟ್ ಕಟ್ಟಡಗಳಿದ್ದು ಮರದ ಬೇರುಗಳು ಶಿಥಿಲಗೊಂಡಿದೆ. ಮರದ ಸುತ್ತಲೂ ಇರುವ ಕಲ್ಲಿನ ಗೋಡೆಗಳು ಬಿರುಕುಬಿಟ್ಟಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಕಳೆದ 2 ತಿಂಗಳ ಹಿಂದೆ ಈ ಕುರಿತು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದ್ದು ಕೆಡಿಪಿ ಸಭೆಯಲ್ಲೂ ಮರವನ್ನು ತೆರವು ಮಾಡುವ ಬಗ್ಗೆ ಒಮ್ಮತವಾಗಿದೆ. ಆದರೆ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗಾಂಧಿಯ ಸ್ಮಾರಕವನ್ನು ಅಲ್ಲೇ ಉಳಿಸಿಕೊಂಡು ಅಲ್ಲಿದ್ದ ಕಟ್ಟೆಯನ್ನು ತೆರವು ಮಾಡಿ ಮರವನ್ನು ಕಡಿಯಬೇಕು. ಇಲ್ಲವಾದರೆ ಮರ ಉರುಳಿ ಬಿದ್ದರೆ ಸಾರ್ವಜನಿಕರು ಅಥವಾ ಶಾಲಾ ಮಕ್ಕಳ ಮೇಲೆ ಬಿದ್ದರೂ ಅಚ್ಚರಿಯಿಲ್ಲ. ಅಪಾಯ ಸಂಭವಿಸುವ ಮುನ್ನವೇ ಮರವನ್ನು ತೆರವು ಮಾಡಬೇಕು. ಅಪಾಯ ಉಂಟಾದಲ್ಲಿ ಸಂಬಂಧಿಸಿದ ಇಲಾಖೆಯನ್ನೇ ಜವಾಬ್ದಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಅಶ್ವತ್ಥ ಕಟ್ಟೆಯನ್ನು ತೆರವು ಮಾಡುವ ವಿಚಾರದಲ್ಲಿ ಈ ಹಿಂದೆ ಗೊಂದಲ ಉಂಟಾಗಿದ್ದು ಮರದ ಬಳಿ ದೇವರ ಕಟ್ಟೆ ಇತ್ತು. ಆದರೆ ಕಳೆದ ಜಾತ್ರೆಯ ಸಂದರ್ಭದಲ್ಲಿ ಅಲ್ಲಿದ್ದ ದೇವರ ಕಟ್ಟೆಯನ್ನು ಬಸ್ ನಿಲ್ದಾಣದ ಬಳಿ ಸ್ಥಳಾಂತರ ಮಾಡಲಾಗಿದ್ದು, ಗಾಂಧಿಕಟ್ಟೆಯ ಮರದ ಬಳಿ ಇರುವ ಕಟ್ಟೆ ಈಗ ದೇವರ ಕಟ್ಟೆಯಾಗಿಲ್ಲ. ಆದರೂ ಮರ ಕಡಿಯದಂತೆ ಕೆಲವರು ಆಕ್ಷೇಪ ಮಾಡಿರುವ ಕಾರಣ ಮರ ಕಟಾವಿಗೆ ವಿಳಂಬವಾಗುತ್ತಿದೆ. ಆದರೆ ಮರ ದಿನೇ ದಿನೇ ಅಪಾಯಕಾರಿ ಹಂತಕ್ಕೆ ಬೆಳೆಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ.