ಮೌಂಟ್ ಕಾರ್ಮೆಲ್ ಶಾಲಾ ಮಕ್ಕಳ ಸುರಕ್ಷತೆಗೆ ಭೀತಿಯೊಡ್ಡಿದ ಗ್ಯಾರೇಜ್ ತೆರವಿಗೆ ಸಹಿ ಸಂಗ್ರಹ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶಾಲಾ ಮಕ್ಕಳ ಸುರಕ್ಷತೆಗೆ ಆತಂಕವೊಡ್ಡುತ್ತಿರುವ ಮೇರಿ ಹಿಲ್ಲಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲಿಗೆ ಹೊಂದಿಕೊಂಡಿರುವ ಗೂಡಂಗಡಿಗಳು ಮತ್ತು ಗ್ಯಾರೇಜು ಸ್ಥಳಾಂತರಿಸುವಂತೆ ಆಗ್ರಹಿಸಿ ಪಾಲಕರು ಶಿಕ್ಷಕರ ಅಸೋಸಿಯೇಶನ್ ಸಹಿ ಸಂಗ್ರಹ ಆಂದೋಲನ ಆರಂಭಿಸಿದೆ.

ಈ ಗ್ಯಾರೇಜ್ ಅನಧಿಕೃತವಾಗಿದ್ದು, ಶಾಲಾ ಬಾಲಕಿಯರ ಸುರಕ್ಷತೆಗೆ ಧಕ್ಕೆಯೊಡ್ಡುವಂತಿದೆ. “2011ರಿಂದಲೂ ನಾವು ಹಲವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಿನ ಮೇಯರ್ ಕವಿತಾ ಸನಿಲರ ಪುತ್ರಿ ಇದೇ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಶಾಲೆಯ ಆಸುಪಾಸಿನಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ. ಗುರುಗ್ರಾಂ ಕೊಲೆ ಬಳಿಕ ಇಲ್ಲಿನ ವಿದ್ಯಾರ್ಥಿಗಳು ಹೆದರಿಕೊಂಡಿದ್ದಾರೆ. ಪರಿಣಾಮ, ಈ ಬಾರಿ ನಾವು ಸಹಿ ಆಂದೋಲನ ನಡೆಸುತ್ತಿದ್ದೇವೆ” ಎಂದು ಅಸೋಸಿಯೇಶನ್ನಿನ ಪ್ರಮುಖರೊಬ್ಬರು ತಿಳಿಸಿದರು.

“ಶಾಲೆ ಮುಚ್ಚಿದಾಗ ಇಲ್ಲಿನ ಅಂಗಡಿಗಳಲ್ಲಿ ಹಲವಾರು ಒರಟು ವ್ಯಕ್ತಿಗಳು ಕಾಣ ಸಿಗುತ್ತಾರೆ. ಈ ಅಂಗಡಿ ಸ್ಥಳಾಂತರಿಸಲೇಬೇಕು” ಎಂದು ಮತ್ತೊಬ್ಬರು ಒತ್ತಾಯಿಸಿದ್ದಾರೆ. “ಈ ವಾರ್ಡಿನ ಕಾರ್ಪೊರೇಟರ್ ಆಗಿರುವ ಮೇಯರ್ ಕವಿತಾರಿಗೂ ಅಂಗಡಿ ಸ್ಥಳಾಂತರಕ್ಕೆ ಆದೇಶಿಸಲು ಆಸಕ್ತಿ ಇಲ್ಲ” ಎಂದು ಸ್ಥಳೀಯ ಮತ್ತೊಬ್ಬರು ದೂರಿದ್ದಾರೆ.

“ನಾವು ಈವರೆಗೆ ಮಾಡಿರುವ ಪ್ರಯತ್ನಗಳೆಲ್ಲ ವಿಫಲವಾಗಿವೆ. ಈಗ ಪಾಲಕರು ಮತ್ತು ಮಕ್ಕಳು ಸಹಿ ಸಂಗ್ರಹ ಆಂದೋಲನ ಕೈಗೊಂಡಿದ್ದಾರೆ. ಸಹಿ ಪಟ್ಟಿಯನ್ನು ಡೀಸಿ ಮತ್ತು ಇತರರಿಗೆ ಸಲ್ಲಿಸಲಿದ್ದಾರೆ” ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೆಲಿಸಾ ಹೇಳಿದರು.