ಉಡುಪಿ ಡೀಸಿ ವರ್ಗಾವಣೆಗೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ದಲಿತ ವಿರೋಧಿ ಅಧಿಕಾರಿ ಎಂದು ಸಮತಾ ಸೈನಿಕದಳ ರಾಜ್ಯ ಮಹಾ ಕಾರ್ಯದರ್ಶಿ ಲೋಲಾಕ್ಷ ಆರೋಪಿಸಿದ್ದಾರೆ.

ರವಿವಾರ ಸಮಾವೇಶದಲ್ಲಿ ಮಾತನಾಡಿದ ಅವರು, “ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತನ್ನ ದಲಿತ ವಿರೋಧಿ ನಡತೆಯನ್ನು 2 ಬಾರಿಯ ಘಟನೆಗಳಲ್ಲಿ ಸಾಬೀತುಪಡಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಪ್ರಿಯಾಂಕರು ಉಡುಪಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸಂದರ್ಭ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಬೆಂಬಲದೊಂದಿಗೆ ಆಕೆ ಉಡುಪಿ ಜಿಲ್ಲೆಯ ಸಿರಿಯಾರ ಗ್ರಾ ಪಂ ಅಧ್ಯಕ್ಷೆ ಜ್ಯೋತಿಯನ್ನು ಅವರ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಜ್ಯೋತಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆ. ಜಿಲ್ಲಾಧಿಕಾರಿ ಪ್ರಿಯಾಂಕರು ಈ ಪ್ರಕರಣದಲ್ಲಿ ಕಾನೂನು ಉಲ್ಲಂಘಿಸಿ ಜ್ಯೋತಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ” ಎಂದು ಆರೋಪಿಸಿದರು.

“ಉಡುಪಿ ಜಿ ಪಂ ಅಧ್ಯಕ್ಷ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ದಿನಕರ ಬಾಬು ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ದಿನಕರ ಬಾಬು ಅವರಿಗೆ ಅಗೌರವ ತೋರಿಸಿದ್ದಾರೆ. ಪ್ರಿಯಾಂಕ ಮೇರಿ ಕಾರ್ಯಕ್ರಮ ನಿಗದಿಗೊಳಿಸಿದ ಸಮಯಕ್ಕಿಂತ ಒಂದೂವರೆಗೆ ಗಂಟೆ ತಡವಾದರೂ ಕಾರ್ಯಕ್ರಮ ಆರಂಭಿಸುವಂತೆ ಕಾರ್ಯಕ್ರಮ ಸಂಯೋಜಕರಿಗೆ ಸೂಚಿಸಿಲ್ಲ. ಹೆಚ್ಚು ತಡವಾದುದರಿಂದ ದಿನಕರ ಬಾಬು ಅಲ್ಲಿಂದ ನಿರ್ಗಮಿಸಲು ನಿರ್ಧರಿಸಿದರು. ಆತ ಸ್ಥಳದಿಂದ ತೆರಳಿದ ಕೆಲವೇ ಸಮಯದಲ್ಲಿ ಡೀಸಿ ದಿನಕರಬಾಬುಗೆ ಕರೆ ಮಾಡಿ ಬೇಕಾಬಿಟ್ಟಿ ಬೈಯಲಾರಂಭಿಸಿದರು. ಮರುದಿನ ದಿನಕರ ಬಾಬುಗೆ ಉಡುಪಿಯ ಎಸ್ಪಿ ಮತ್ತು ಡಿವೈಎಸ್ಪಿ ಕರೆಮಾಡಿ ಡೀಸಿ ಮತ್ತು ದಿನಕರ ಬಾಬು ನಡುವೆ ಏರ್ಪಟ್ಟಿರುವ ವಿವಾದವನ್ನು ಪರಿಹರಿಸುವುದಾಗಿ ಹೇಳಿದ್ದರು. ದಿನಕರ ಬಾಬು ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ ನಂತರ ಈ ಪ್ರಕರಣವನ್ನು ಅವರು ಎಲ್ಲಿಯೂ ಪ್ರಸ್ತಾಪಿಸಿಲ್ಲ” ಎಂದು ದೂರಿದರು.

“ಸಮತಾ ಸೈನಿಕದಳಕ್ಕೆ 3ನೇ ವ್ಯಕ್ತಿಯಿಂದ ಈ ಪ್ರಕರಣ ತಿಳಿದುಬಂದಿದೆ. ಹಾಗಾಗಿ ಸಮತಾ ಸೈನಿಕದಳವು ದಲಿತ ವಿರೋಧಿ ಡೀಸಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದೆ. ಒಂದು ವೇಳೆ ವರ್ಗಾವಣೆ ಮಾಡದೇ ಇದ್ದರೆ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ. ಸಮತಾ ಸೈನಿಕದಳದ ರಾಜ್ಯಾಧ್ಯಕ್ಷ ಎಂ ವೆಂಕಟಸ್ವಾಮಿ ಉಪಸ್ಥಿತರಿದ್ದರು.

LEAVE A REPLY