ಮರಳು ಕೊರತೆ ಶೀಘ್ರ ಪರಿಹರಿಸಲು ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಜಿಲ್ಲೆಯಲ್ಲಿ ಎದುರಾಗಿರುವ ಮರಳು ಕೊರತೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿ ಸಿವಿಲ್ ಸಲಹಾ ಅಭಿಯಂತರರ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಮರಳಿನ ಅಭಾವದಿಂದ ಕಟ್ಟಡ, ಮನೆ, ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಅಲ್ಲದೆ ಈ ಉದ್ಯೋಗವನ್ನು ನಂಬಿ ಜೀವನ ನಡೆಸುತ್ತಿರುವ ಹಲವು ಕಾರ್ಮಿಕರಿಗೆ ತೊಂದರೆ ಉಂಟಾಗಿದೆ. ಮರಳಿನ ಕೊರತೆಯಿಂದಾಗಿ ಸರ್ಕಾರಿ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗಿದೆ. ಸರ್ಕಾರಿ ಹಣ ವ್ಯರ್ಥವಾಗುತ್ತಿದೆ. ಅಲ್ಲದೆ ಮನೆ, ಕಟ್ಟಡ, ಅಂಗಡಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಮಳೆಗಾಲ ಪ್ರಾರಂಭವಾಗುವ ಮೊದಲು ಮುಗಿಸಬೇಕೆಂದುಕೊಂಡವರಿಗೆ ನಿರಾಸೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಾರವಾರ ಸೇರಿದಂತೆ ಕರಾವಳಿ ಭಾಗದಲ್ಲಿ ಎಲ್ಲ ದಿನಗಳಲ್ಲಿಯೂ ಕಟ್ಟಡ ಕಾಮಗಾರಿಗಳನ್ನು ನಡೆಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಕಟ್ಟಡ ಕಾಮಗಾರಿಳಿಗೆ ಅಡಿಪಾಯ ಹಾಕಬೇಕು. ಇಲ್ಲವಾದಲ್ಲಿ ಹೆಚ್ಚಾಗಿ ಮಣ್ಣು ಮರಳು ಮಿಶ್ರಿತವಾಗಿರುವುದರಿಂದ ಕುಸಿತವುಂಟಾಗುತ್ತದೆ. ಆದರೆ ಇದೀಗ ಕಳೆದ ಕೆಲ ತಿಂಗಳಿಂದ ಮರಳು ಸಂಪೂರ್ಣ ಸ್ಥಗಿತಗೊಂಡಿದ್ದು, ಈವರೆಗೂ ಹೊಸ ಕಾಮಗಾರಿಗಳು ಪ್ರಾರಂಭಗೊಂಡಿಲ್ಲ. ಇದರಿಂದ ಮುಂದಿನ ವರ್ಷ ಕಾಮಗಾರಿಗಳೆ ಸಿಗದೆ, ಕಟ್ಟಡ ನಿರ್ಮಾಣ ಉದ್ಯಮ ನಿಷ್ಕ್ರಿಯೊಳ್ಳುವ ಆತಂಕ ಎದುರಾಗಿದೆ. ಮರಳು ಕೊರತೆಯಾದ ಬಗ್ಗೆ ಆರಂಭದಲ್ಲಿಯೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದಾಗ ಮಾರ್ಚ್ ಮೊದಲವಾರದ ವೇಳೆ ಲಭ್ಯವಾಗುತ್ತದೆ ಎಂಬ ಭರವಸೆ ನೀಡಲಾಗಿತ್ತು. ಆದರೆ ಇದೀಗ ಅದು ಸುಳ್ಳಾಗಿದೆ. ಕೂಡಲೇ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಮರಳು ಲಭ್ಯವಾಗುವಂತೆ ಮಾಡಬೇಕು. ಇಲ್ಲವಾದಲ್ಲಿ ಸಮಸ್ಯೆ ಇನ್ನು ಉಲ್ಭಣವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.