ಫರಂಗಿಪೇಟೆ ಹೊಳೆ ಬದಿ ಸಂಪರ್ಕ ರಸ್ತೆ ದುರಸ್ತಿಗೆ ನಾಗರಿಕರ ಆಗ್ರಹ

ನಾದುರಸ್ತಿಯಲ್ಲಿರುವ ಫರಂಗಿಪೇಟೆ-ಹೊಳೆಬದಿ ರಸ್ತೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಪ್ರಮುಖ ಜಂಕ್ಷನ್ ಆಗಿ ಬೆಳೆಯುತ್ತಿರುವ ಫರಂಗಿಪೇಟೆ ಪೇಟೆಯಿಂದ ಹೊಳೆ ಬದಿ ಸಂಪರ್ಕಿಸುವ ರಸ್ತೆಯು ಕಳೆದ ಹಲವು ಸಮಯಗಳಿಂದ ನಾದುರಸ್ತಿಯಲ್ಲಿದ್ದು, ಸಂಚಾರಕ್ಕೆ ಅಯೋಗ್ಯವಾಗಿರುವ ಹಿನ್ನೆಲೆಯಲ್ಲಿ ಈ ರಸ್ತೆಗೆ ಸೂಕ್ತ ಕಾಯಕಲ್ಪ ಒದಗಿಸುವಂತೆ ಸ್ಥಳೀಯ ನಾಗರಿಕರು ಸ್ಥಳೀಯಾಡಳಿತವನ್ನು ಆಗ್ರಹಿಸಿದ್ದಾರೆ.

ಫರಂಗಿಪೇಟೆ ಜಂಕ್ಷನಿನಲ್ಲೇ ಇರುವ ಹಳೆ ಹೆದ್ದಾರಿಯ ಪುದು ಗ್ರಾಮ ಪಂಚಾಯತ್ ಕಚೇರಿ ಸಮೀಪದಿಂದ ತಿರುವು ಪಡೆಯುತ್ತಿರುವ ಹೊಳೆ ಬದಿ ರಸ್ತೆಯ ಮೂಲಕ ಸಂಚರಿಸಿದರೆ ಹಲವು ವಾಸ್ತವ್ಯದ ಮನೆಗಳಿವೆ. ಇಲ್ಲಿನ ವಾಸಿಗಳು ಫರಂಗಿಫೇಟೆ ಜಂಕ್ಷನ್ ಸಂಪರ್ಕ ಸಾಧಿಸುವರೇ ಇದೇ ರಸ್ತೆಯನ್ನು ಆಶ್ರಯಿಸಿಕೊಂಡಿದ್ದಾರೆ. ಅಲ್ಲದೇ ನೇತ್ರಾವತಿ ನದಿ ದಾಟಿ ನದಿಯ ಇನ್ನೊಂದು ಭಾಗದಲ್ಲಿರುವ ಊರುಗಳಿಗೆ ಸಂಚರಿಸುವ ಪ್ರಯಾಣಿಕರು ದೋಣಿಗಾಗಿ ನದಿ ಬದಿಗೆ ತಲುಪುವರೇ ಇದೇ ರಸ್ತೆಯನ್ನು ಬಳಸುತ್ತಿರುವುದಾಗಿರುತ್ತದೆ.

ಕಳೆದ ಹಲವು ವರ್ಷಗಳಿಂದ ಈ ಪ್ರಮುಖ ರಸ್ತೆಯು ನಾದುರಸ್ತಿಯಲ್ಲಿದೆ. ಇಲ್ಲಿನ ನಾಗರಿಕರ ಬವಣೆಗೆ ಈಗಲಾದರೂ ಸ್ಥಳೀಯಾಡಳಿತ ಸ್ಪಂದಿಸಿ ಇಲ್ಲಿನ ರಸ್ತೆಗೆ ಸೂಕ್ತ ಡಾಮರೀಕರಣ ಅಥವಾ ಕಾಂಕ್ರಿಟೀಕರಣ ನಡೆಸಿ ಸುಸ್ಥಿತಿಗೆ ತರುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.