ಸರ್ಕಾರಿ ಜಾಗದಲ್ಲಿ ಅಕ್ರಮ ಶೆಡ್ ತೆರವಿಗೆ ಕಿಲ್ಪಾಡಿ ಗ್ರಾಮ ಸಭೆಯಲ್ಲಿ ಆಗ್ರಹ

ಸಾಂದರ್ಭಿಕ ಚಿತ್ರ

ತೆರವಿಗೆ ಕಿಲ್ಪಾಡಿ ಗ್ರಾಮ ಸಭೆಯಲ್ಲಿ ಆಗ್ರಹ

 ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಕಿಲ್ಪಾಡಿ ಪಂಚಾಯತಿಯ ಗ್ರಾಮ ಸಭೆ ಬೆಥನಿ ಶಾಲಾ ಸಭಾಭವನದಲ್ಲಿ ನಡೆಯಿತು. ಸಭೆ 10.30ಗೆ ಶುರುವಾಗಬೇಕಾದದ್ದು ಶುರುವಾದಾಗ ಬರೋಬ್ಬರಿ 11.30. ಸಭೆಯಲ್ಲಿ ಗ್ರಾಮಸ್ಥರ ಕೊರತೆ ಎದ್ದು ಕಾಣುತ್ತಿದ್ದು, ಕೇವಲ 15 ಮಂದಿ ಗ್ರಾಮಸ್ಥರಿದ್ದರು. ವೇದಿಕೆಯಲ್ಲಿ ಪಂಚಾಯತಿ ಸದಸ್ಯರ ಸಹಿತ ಅಧಿಕಾರಿಗಳ ಸಂಖ್ಯೆ ಸುಮಾರಾಗಿ ಕಾಣುತ್ತಿದ್ದುದನ್ನು ಪ್ರಶ್ನಿಸಿದ ಗ್ರಾಮಸ್ಥ ಜಿ ಎಸ್ ಕರ್ಕೆರಾ, “ಗ್ರಾಮ ಸಭೆ ಯಾವ ಪರುಷಾರ್ಥಕ್ಕಾಗಿ ?” ಎಂದು ಬೇಸರ ವ್ಯಕ್ತಪಡಿಸಿದರು.

“ಕಿಲ್ಪಾಡಿ ಪಂಚಾಯತಿಯ ಕೂಗಳತೆಯಲ್ಲಿರುವ ಸರಕಾರಿ ಜಾಗದಲ್ಲಿ ಸುಧೀರ್ ಸುವರ್ಣ ಎಂಬವರು ಅಕ್ರಮವಾಗಿ ಶೆಡ್ ನಿರ್ಮಿಸಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪಂಚಾಯತಿಗೆ ದೂರು ನೀಡಿದರೂ ಪಂಚಾಯತಿ ಯಾವುದೇ ಕ್ರಮಕೈಗೊಂಡಿಲ್ಲ” ಎಂದು ಗ್ರಾಮಸ್ಥ ನರೇಂದ್ರ ಆಕ್ರೋಶ ವ್ಯಕ್ತಪಡಿಸಿದಾಗ ಉತ್ತರಿಸಿದ ಅಧ್ಯಕ್ಷರು, “ಅವರಿಗೆ ನೋಟಿಸ್ ನೀಡಿದ್ದೇವೆ” ಎಂದರು.

ಆಗ ಗ್ರಾಮಸ್ಥರು ಧ್ವನಿಗೂಡಿಸಿ ಕಳೆದ ಕೆಲ ಗ್ರಾಮಸಭೆಯಲ್ಲಿ ಹಾಗೂ ಮಾಧ್ಯಮಗಳಲ್ಲಿ ಈ ಬಗ್ಗೆ ಅನೇಕ ಬಾರಿ ಪ್ರಸ್ತಾಪವಾಗಿದ್ದು, ಪಂಚಾಯತಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದೆ.ಪಂಚಾಯತಿಯಲ್ಲಿ ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನು ಎಂದು ಆರೋಪಿಸಿ ಕೂಡಲೇ ಅಕ್ರಮ ಶೆಡ್ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ಆಗ ನೋಡಲ್ ಅಧಿಕಾರಿ ಯಶೋಧರ ಮಧ್ಯ ಪ್ರವೇಶಿಸಿ ಅಕ್ರಮ ಶೆಡ್ ಕೂಡಲೇ ತೆರವುಗೊಳಿಸಬೇಕೆಂದು ಪಂಚಾಯತಿ ಅಧ್ಯಕ್ಷರಿಗೆ ಸೂಚನೆ ನೀಡಿದರು.