ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಮಹಿಳಾ ಸಬಲೀಕರಣ ಕ್ಲೇಮ್ ತನಿಖೆ ಮಾಡಲು ಆಗ್ರಹ

ನಮ್ಮ ಪ್ರತಿನಿಧಿ ವರದಿ

ಕುಮಟಾ : “ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಹಾಗೂ ಕೆಲವು ಖಾಸಗಿ ಮೈಕ್ರೊ ಫೈನಾನ್ಸ್ ಸಂಸ್ಥೆಗಳು ರಚಿಸಿದ ಸ್ವ-ಸಹಾಯ ಸಂಘದ ಮಹಿಳೆಯರು ಸ್ವಾವಲಂಬಿಗಳಾಗಿ ನೆಮ್ಮದಿಯಿಂದ ಜೀವನ ಸಾಗಿಸುತ್ತಾರೆಯೇ ಎಂಬುದರ ಬಗ್ಗೆ ತನಿಖೆಯಾಗಬೇಕು” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಪಾದ ಇದರ ಜಿಲ್ಲಾಧ್ಯಕ್ಷ ಮಂಜುನಾಥ ಆಗೇರ ಆಗ್ರಹಿಸಿದ್ದಾರೆ.

ಅವರು ಗುರುವಾರ ಫತ್ರಕರ್ತರೊಂದಿಗೆ ಮಾತನಾಡಿ, “ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಹಾಗೂ ಮೈಕ್ರೊ ಫೈನಾನ್ಸ್ಸಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಂದಿರುವ ಕಾರ್ಯಾಲಯಗಳ ಸಿಬ್ಬಂದಿಗಳ ಕುರಿತು ತನಿಖೆಯಾಗಬೇಕು. ಈ ಮೈಕ್ರೊ ಫೈನಾನ್ಸಗಳು ಸಂಘಗಳಿಗೆ ನೀಡುತ್ತಿರುವ ಸಾಲದ ಹಣದ ಮೂಲ ಯಾವುದೆಂಬುದು ಗೊತ್ತಾಗಬೇಕು. ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ನೀತಿ ಬದಲಿಸಿ, ಮಧ್ಯವರ್ತಿಗಳ ಮುಖಾಂತರ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡುವುದನ್ನು ನಿಲ್ಲಿಸಿ ನೇರವಾಗಿ ಬ್ಯಾಂಕಿನಿಂದ ಕಿರುಸಾಲ ಸಿಗುವಂತೆ ವ್ಯವಸ್ಥೆ ಕಲ್ಪಿಸಿ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರು ಪೂರ್ಣ ಪ್ರಮಾಣದ ಪ್ರಯೋಜನ ಪಡೆಯುವಂತೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

“ಇಲ್ಲದಿದ್ದರೆ ಮುಂದಿನ ಹೋರಾಟವಾಗಿ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ದೂರು ಸಲ್ಲಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗುವುದು. ಕ್ರಮವಾಗದಿದ್ದಲ್ಲಿ ಹೈಕೋರ್ಟಿನಲ್ಲಿ ಖಾಸಗಿ ದೂರನ್ನು ದಾಖಲಿಸುವ ಕುರಿತು ಚಿಂತಿಸಲಾಗುವುದು” ಎಂದರು. .