ಸಾಂಪ್ರದಾಯಿಕ ಮರಳುಗಾರಿಕೆಗೆ ಆಗ್ರಹ

ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತಾಯಿಸುತ್ತಿರುವ ಕಾರ್ಮಿಕರು

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕರಾವಳಿಯಲ್ಲಿ ನಿಂತುಹೋದ ಮರಳುಗಾರಿಕೆಯಿಂದ ಸಾಂಪ್ರದಾಯಿಕ ಮರಳು ಕಾರ್ಮಿಕರಿಗೆ ಸಮಸ್ಯೆಯುಂಟಾಗುತ್ತಿದೆ ಎಂದು ಸ್ಥಳೀಯ ಸಾಂಪ್ರದಾಯಿಕ ಮರಳು ಕಾರ್ಮಿಕರ ಸಂಘದ ವತಿಯಿಂದ ಕುಂದಾಪುರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕಳೆದ ಮೂವತ್ತು ವರ್ಷಗಳಿಂದ ಸರ್ಕಾರಿ ಪರವಾನಿಗೆಯ ಜೊತೆಗೆ ಒಂದೆರಡು ದೋಣಿ ಬಳಸಿ ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸಂಪ್ರದಾಯ ಕರಾವಳಿಯಲ್ಲಿ ಚಾಲ್ತಿಯಲ್ಲಿತ್ತು. ಇದರಿಂದಾಗಿ ಸ್ಥಳೀಯವಾಗಿ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡಗಳು ಮತ್ತು ಮನೆಗಳ ನಿರ್ಮಾಣದಲ್ಲಿ ಯಾವುದೇ ಸಮಸ್ಯೆಗಳುಂಟಾಗಿರಲಿಲ್ಲ. ಆದರೆ ಇದೀಗ ರಾಜಕೀಯ ತಂತ್ರಕ್ಕೆ ಮಣಿದು ಮರಳುಗಾರಿಕೆಯನ್ನೇ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಈ ಬಗ್ಗೆ ಉಪವಿಭಾಗಾಧಿಕಾರಿ ಪ್ರತಿಕ್ರಿಯಿಸಿದ್ದು, “ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಿ” ಎಂದು ಸಲಹೆ ನಿಡಿದ್ದಾರೆ.

ಮರಳು ಕಾರ್ಮಿಕರು ಹಾಗೂ ಮರಳನ್ನೇ ನಂಬಿ ಬ್ಯಾಂಕು, ಸಂಘ ಸಂಸ್ಥೆಗಳಲ್ಲಿ ಸಾಲ ಪಡೆದು ಮರಳು ಸಾಗಾಟಕ್ಕೆ ಲಾರಿ, ಟಿಪ್ಪರುಗಳನ್ನು ಖರೀದಿಸಿದವರಿಗೆ ಸಾಲ ಕಟ್ಟಲಾಗದೆ, ಹೊಟ್ಟೆ ತುಂಬಿಸಿಕೊಳ್ಳಲಾಗದೆ ಪರದಾಡುವಂತಾಗಿದೆ ಎಂದು ಸಾಂಪ್ರದಾಯಿಕ ಮರಳು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.