ಲೈಟ್ ಹೌಸ್ ಹಿಲ್ ರಸ್ತೆಗೆ ಬಾವುಟಗುಡ್ಡ ಹೆಸರಿಡಲು ರಕ್ಷಣಾ ವೇದಿಕೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಲೈಟ್ ಹೌಸ್ ಹಿಲ್ ರಸ್ತೆಯನ್ನು ಸ್ಥಳೀಯವಾಗಿ ಬಾವುಟಗುಡ್ಡ ಎಂದು ಕರೆಯಲಾಗುತ್ತಿದ್ದು, ಹಾಗಾಗಿ ಈ ರಸ್ತೆಗೆ ಅದೇ ಹೆಸರಿಡಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಳೀಯಾಡಳಿತವನ್ನು ಒತ್ತಾಯಿಸಿದೆ.

“ಹಂಪನಕಟ್ಟೆ ವೃತ್ತದಿಂದ ಜ್ಯೋತಿ ಸಿನಿಮಾ ಮಂದಿರವರೆಗಿನ ರಸ್ತೆಯನ್ನು ನೂರಾರು ವರ್ಷಗಳಿಂದ ಬಾವುಟಗುಡ್ಡ ರಸ್ತೆ ಎಂದೇ ಗುರುತಿಸಲಾಗಿದೆ. 1837ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕಲ್ಯಾಣ ಸ್ವಾಮಿ, ಕೆದಂಬಾಡಿ ರಾಮಗೌಡ, ಲಕ್ಮಪ್ಪ ಬಂಗರಸ, ಹುಲಿಕುಂಡ ನಂಜಯ್ಯ ಮತ್ತು ಉಪ್ಪಿನಂಗಡಿ ಮಂಜ ಬ್ರಿಟಿಷರ ವಿರುದ್ಧ ಹೋರಾಡಿ ಟಾಗೋರ್ ಪಾರ್ಕ್ ಸಮೀಪ ಬ್ರಿಟಿಷರ ಬಾವುಟವನ್ನು ಕೆಳಗಿಳಿಸಿ ತುಳುನಾಡು ಬಾವುಟವನ್ನು ಹಾರಿಸಿದ್ದರು. ಆ ಬಳಿಕ ಆ ಪ್ರದೇಶವನ್ನು ಬಾವುಟ ಗುಡ್ಡ ಎಂದು ಕರೆಯಲಾಗುತ್ತಿದೆ” ಎಂದು ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪನಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಪ್ರಾರಂಭಿಕ ದಿನಗಳಿಗೆ ಸಂಪರ್ಕ ಹೊಂದಿರುವ ಮತ್ತು ತುಳುನಾಡಿನ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಲೈಟ್ ಹೌಸ್ ಹಿಲ್ ರಸ್ತೆಯನ್ನು ಬಾವುಟ ಗುಡ್ಡ ರಸ್ತೆ ಎಂದು ಹೆಸರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.