ಸುರತ್ಕಲ್ ಲೈಟ್ ಹೌಸ್ ಬಳಿ ಪೊಲೀಸ್ ಗಸ್ತು ಹೆಚ್ಚಿಸಲು ಸಾರ್ವಜನಿಕರ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸುರತ್ಕಲ್ ಬೀಚಿಗೆ ನಿತ್ಯ ಭೇಟಿ ನೀಡುತ್ತಿರುವವ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಕಾರಣ ಸುರತ್ಕಲ್ ಲೈಟ್ ಹೌಸ್ ಬಳಿ ರಾತ್ರಿ 8 ಗಂಟೆಯ ಬಳಿಕ ಪೊಲೀಸ್ ಗಸ್ತು ಹೆಚ್ಚಿಸುವಂತೆ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಶುಕ್ರವಾರ ನಡೆದ ಪೊಲೀಸ್ ಆಯುಕ್ತರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಾರ್ವಜನಿಕರೊಬ್ಬರು ಈ ಬೇಡಿಕೆಯನ್ನಿಟ್ಟಿದ್ದು, ಸಂಜೆ 6ರಿಂದ 8 ಗಂಟೆಯ ಅವಧಿಯಲ್ಲಿ ಮೂರು ಬಾರಿ ಇಲ್ಲಿ ಪೊಲೀಸರ ಗಸ್ತು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

“ಇಲ್ಲಿ ರಾತ್ರಿ 8 ಗಂಟೆ ಬಳಿಕ ಪೊಲೀಸರು ಇರುವುದಿಲ್ಲ. ಅಲ್ಲದೆ ದಾರಿದೀಪ ಇಲ್ಲದೆ ಕತ್ತಲಾವರಿಸುತ್ತಿದ್ದಂತೆ ಸಂಚರಿಸಲು ಭೀತಿ ಉಂಟಾಗುತ್ತಿದೆ. ರಾತ್ರಿ 8 ಗಂಟೆ ಬಳಿಕ ಕನಿಷ್ಠ 3 ಬಾರಿಯಾದರೂ ಇಲ್ಲಿ ಪೊಲೀಸ್ ವಾಹನ ಓಡಾಡುವಂತೆ ಮಾಡಬೇಕಾಗಿದೆ. ಬೀಚ್ ಸೌಂದರ್ಯ ನೋಡಲು ಬರುವ ಪ್ರವಾಸಿಗರು ರಾತ್ರಿ ಲೈಟ್ ಹೌಸ್ ಹಾಗೂ ಬೀಚಿನಲ್ಲಿ ಕುಳಿತುಕೊಳ್ಳದಂತೆ ಕಳುಹಿಸಿಕೊಡಬೇಕು” ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಪಿ (ಕ್ರೈಮ್ ಅಂಡ್ ಟ್ರಾಫಿಕ್) ಎಂ ಸಂಜೀವ್ ಪಾಟೀಲ್, “ಇಲ್ಲಿ ಗಸ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ದಾರಿದೀಪಗಳನ್ನು ಅಳವಡಿಸುವಂತೆ ನಗರ ಪಾಲಿಕೆಗೆ ಸೂಚಿಸಲಾಗುವುದು” ಎಂದರು.

“ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕನಿಷ್ಠ 20 ನಿಮಿಷಗಳ ಕಾಲ ಪಾರ್ಕಿಂಗ್ ಮಾಡುವುದಕ್ಕೆ ರಿಕ್ಷಾ ಚಾಲಕರಿಗೆ ಅವಕಾಶ ನೀಡಬೇಕು” ಎಂದು ಬಜ್ಪೆಯ ರಿಕ್ಷಾ ಚಾಲಕರು ಮನವಿ ಮಾಡಿದರು.