ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಆಗ್ರಹ

ಕೃಷಿ ಜಯಂತಿ ಸಮಾರೋಪದಲ್ಲಿ ನಿರ್ಣಯ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಮಲೆನಾಡಿನ ಸಣ್ಣ ಹಳ್ಳ ಹಾಗೂ ಹೊಳೆಗಳಿಗೆ ಚಿಕ್ಕ ಕಟ್ಟುಗಳನ್ನು ಹಾಕಲು ಸರ್ಕಾರ ರೈತರಿಗೆ ಪೆÇ್ರೀತ್ಸಾಹಧನ ನೀಡಬೇಕು. ಕೆರೆಗಳಿಗೆ ನದಿ ನೀರನ್ನು ತುಂಬಿಸುವ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಮಂಗಳವಾರ ಸಂಜೆ ಸ್ವರ್ಣವಲ್ಲಿಯಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಜಯಂತಿ ಸಮಾರೋಪದಲ್ಲಿ ಕೈಗೊಳ್ಳಲಾಯಿತು.

ಸ್ವರ್ಣವಲ್ಲಿ ಶ್ರೀಗಳ ಸಾನಿಧ್ಯದಲ್ಲಿ ನಡೆದ ಸಮಾರೋಪದಲ್ಲಿ ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಪಾತಾಳಗಂಗೆಗಿಂತ ಆಕಾಶಗಂಗೆಯೇ ಪರಿಸರಕ್ಕೆ ಹೆಚ್ಚು ಅನುಕೂಲಕರವಾಗಿದ್ದು ಮಳೆ ಕೊಯ್ಲಿನ ಕುರಿತು ಜನರು ಜಾಗ್ರತರಾಗಬೇಕು. ಪಾತಾಳಗಂಗೆ ಯೋಜನೆಗಳ ಕುರಿತ ಸಾಧಕ-ಬಾಧಕಗಳನ್ನು ಸಾರ್ವಜನಿಕರಲ್ಲಿ ಚರ್ಚಿಸಿ ಅನುಷ್ಠಾನಗೊಳಿಸಬೇಕು. ನೀರಾವರಿ ಯೋಜನೆಗಳಲ್ಲಿ ಕಾಲುವೆಯಲ್ಲಿ ನೀರನ್ನು ಹರಿಸುವ ಬದಲಾಗಿ ಪೈಪ್ ಮಖಾಂತರ ಹರಿಸಿ ಹನಿ ನೀರಾವರಿಗೆ ಉತ್ತೇಜನ ಕೊಡಬೇಕು. ಎಲ್ಲ ಪಟ್ಟಣ/ನಗರದ ಕೊಳಚೆನೀರನ್ನು ಸಂಸ್ಕರಿಸಿ ಕೃಷಿಗೆ ಸಿಗುವಂತೆ ಮಾಡಬೇಕು. ಕೆರೆ ಹಾಗೂ ಕಲ್ಯಾಣಿಗಳನ್ನು ಸುಸ್ಥಿತಿಯಲ್ಲಿಡಲು ಜನಾಂದೋಲನ ಆಗಬೇಕು. ಅಡಿಕೆ ತೋಟಗಳ ಪಕ್ಕದ ಸೊಪ್ಪಿನಬೆಟ್ಟಗಳಲ್ಲಿ ಶೇಕಡಾ 30ರಷ್ಟು ಮಳೆಯ ನೀರನ್ನು ಇಂಗಿಸಿದರೆ ತೋಟಗಳಲ್ಲಿ ನೀರ ನೆಮ್ಮದಿ ಸಾಧ್ಯವಿದೆ. ವಾಡಿಕೆಯ ಕಡಿಮೆ ಮಳೆಯಲ್ಲೂ ತೋಟಗಳ ಉಳಿಕೆಗೆ ರೈತರು ಕಾರ್ಯಪ್ರವರ್ತರಾಗಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.