ಸದಾಶಿವ ಆಯೋಗ ವರದಿ ಜಾರಿಗೊಳಿಸಲು ಆಗ್ರಹ

ನಮ್ಮ ಪ್ರತಿನಿಧಿ ವರದಿ

ಶಿರಸಿ : “ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರುವುದಿಂದ ಚನ್ನಯ್ಯ ಸಮಾಜದಂತಹ ತುಳಿತಕ್ಕೆ ಒಳಗಾದ ಸಮಾಜಗಳ ಸುಧಾರಣೆ ಸಾಧ್ಯವಿದೆ. ಆದ್ದರಿಂದಲೇ ಒಳಮೀಸಲಾತಿಯನ್ನು ನೀಡಬೇಕೆಂದು ಸೂಚಿಸಿರುವ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಕ್ಷಣ ಜಾರಿಗೆ ತರಬೇಕು” ಎಂದು ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಎಚ್ ಕೆ ಬಸಂತಪ್ಪ ಕೋಟೆ ಆಗ್ರಹಿಸಿದರು.

ಅವರು ಪಟ್ಟಣದ ತಾ ಪಂ ಸಭಾಭವನದಲ್ಲಿ ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ, “ಕೆಲವು ಸಮುದಾಯಗಳು ಇದನ್ನು ವಿರೋಧಿಸಿದರೂ ತುಳಿತಕ್ಕೆ ಒಳಗಾದ ಹಲವು ಸಮಾಜಕ್ಕೆ ವರದಿ ಅನುಷ್ಠಾನದಿಂದ ಸಹಾಯ ಆಗಲಿದೆ” ಎಂದರು.

ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಬನವಾಸಿ ಸೋಮಶೇಖರ ಮಾತನಾಡಿ, “ರಾಜ್ಯಾದ್ಯಂತ ಸುಮಾರು 8 ಲಕ್ಷ ಜನಸಂಖ್ಯೆಯುಳ್ಳ ಚನ್ನಯ್ಯ ಸಮಾಜ ಹಿಂದಿನಿಂದಲೂ ತುಳಿತಕ್ಕೊಳಗಾದ ಸಮಾಜವಾಗಿದ್ದು ಶೈಕ್ಷಣಿಕ, ಸಾಂಸ್ಕøತಿಕ, ಸಾಮಾಜಿಕ ಅಭಿವೃದ್ಧಿಗೆ ಸಂಘಟನೆ ಅಗತ್ಯವಾಗಿದೆ. ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದ್ದು ಇದಕ್ಕೆ ನಮ್ಮಲ್ಲಿ ಒಗ್ಗಟ್ಟಿಲ್ಲದಿರುವುದು ಕಾರಣವಾಗಿದೆ’ ಎಂದರು.