ಕೃಷಿ ರಕ್ಷಣೆಯ ಕಾಂಕ್ರೀಟ್ ತಡೆಗೋಡೆ ವಿಸ್ತರಿಸಲು ಹೆಚ್ಚಿದ ಸ್ಥಳೀಯರ ಬೇಡಿಕೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಹಾಗೂ 7ನೇ ವಾರ್ಡ್ ಪ್ರದೇಶವಾದ ತಲ್ಪಚ್ಚೇರಿ ಪರಿಸರದಲ್ಲಿ ಕೇಂದ್ರ ಸರ್ಕಾರದ ಅನುದಾನದಿಂದ ಕೇರಳ ರಾಜ್ಯ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆಯು ಕಾಡಾನೆಗಳಿಂದ ಕೃಷಿಯನ್ನು ರಕ್ಷಿಸಲು ಬಹಳಷ್ಟು ಸಹಕಾರಿಯಾಗಿವೆ. ಸುಮಾರು 1.8 ಕಿಲೋಮೀಟರ್ ಉದ್ದದ ಈ ತಡೆಗೋಡೆಯ ಮಧ್ಯ ಭಾಗದ ಸುಮಾರು 400 ಮೀಟರ್ ಉದ್ದದ ಪ್ರದೇಶದಲ್ಲಿ ಕಾಮಗಾರಿ ನಡೆದಿಲ್ಲ. ಈ ಪ್ರದೇಶಕ್ಕೆ ಕಚ್ಛಾ ಸಾಮಗ್ರಿಗಳನ್ನು ಕೊಂಡೊಯ್ಯಲು ವ್ಯವಸ್ಥೆ ಇರದ ಕಾರಣ ಈ ಪ್ರದೇಶದಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇದೀಗ ಈ ಸಮಸ್ಯೆ ಪರಿಹಾರವಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಲು ಬೇಡಿಕೆಗಳು ಕೇಳಿ ಬರುತ್ತಿವೆ.

ಕಳೆದ ಕೆಲದಿನಗಳಿಂದ ಕಾಡಾನೆಗಳು ಈ ಪ್ರದೇಶದ ಮೂಲಕ ಕೃಷಿಭೂಮಿಯನ್ನು ಪ್ರವೇಶಿಸಲು ಹೊಂಚು ಹಾಕುತ್ತಿವೆ. ಕೆಲದಿನಗಳ ಹಿಂದೆ ಈ ಪ್ರದೇಶಕ್ಕೆ ಸುಮಾರು 6 ಆನೆಗಳ ತಂಡ ಆಗಮಿಸಿತ್ತು. ಕೃಷಿಕರು ಸಿಡಿಸಿದ ಪಟಾಕಿ ಸದ್ದಿಗೆ ಅರಣ್ಯದ ಕಡೆಗೆ ಓಡಿಹೋದುವು. ಕಾಡಾನೆಗಳು ಕೃಷಿಭೂಮಿಗೆ ಮತ್ತೆ ದಾಳಿ ಮಾಡಲು ಹವಣಿಸುತ್ತಿದ್ದು, ಕೃಷಿಕರು ಕೃಷಿ ರಕ್ಷಣೆಯ ವಿಚಾರದಲ್ಲಿ ಆತಂಕಿತರಾಗಿದ್ದಾರೆ.

ಪ್ರತೀ 1 ಕಿಲೋಮೀಟರಿಗೆ 1.36 ಕೋಟಿ ರೂ ವೆಚ್ಚದಲ್ಲಿ ಈ ತಡೆಬೇಲಿ ನಿರ್ಮಾಣವಾಗಿದ್ದು, ತಡೆಬೇಲಿಯು 2.2 ಮೀಟರ್ ಎತ್ತರವಿದೆ. ಈ ತಡೆಬೇಲಿಯ ಕಾಮಗಾರಿಯು ಅಪೂರ್ಣ ವಾಗಿರುವುದು ಪ್ರದೇಶವಾಸಿಗಳಲ್ಲಿ ಭಯ ಹುಟ್ಟಿಸಿದೆ. ಕಾಮಗಾರಿ ನಡೆಸದೆ ಬಿಟ್ಟಿರುವ ಪ್ರದೇಶದಲ್ಲಿ ಕಾಡಾನೆಗಳು ಒಳ ಪ್ರವೇಶಿಸಿದಲ್ಲಿ ಸುಮಾರು 200ರಿಂದ 250 ಎಕರೆ ಕೃಷಿ ನಾಶವಾಗುವ ಸಾಧ್ಯತೆ ಇದೆ. ಈಗ ನಡೆದಿರುವ 1.4 ಕಿಲೋ ಮೀಟರ್ ತಡೆಬೇಲಿ ಕಾಮಗಾರಿಯು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರ ಆದೇಶದಂತೆ ನಡೆದಿದೆ.

ಉಳಿದಿರುವ 400 ಮೀಟರ್ ಉದ್ದದ ತಡೆಬೇಲಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಕೇಂದ್ರ ಸರ್ಕಾರವು ಕೇರಳ ರಾಜ್ಯ ಸರ್ಕಾರಕ್ಕೆ ಪರಿಸ್ಥಿತಿಯ ಪರಿಶೀಲನೆಗೆ ಆದೇಶಿಸಿರುವುದಾಗಿ ತಿಳಿದುಬಂದಿದೆ.